

ಅರಸೀಕೆರೆ: ನೇಕಾರ ಒಕ್ಕೂಟವನ್ನು ಬಲಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದರು.
ಮಲ್ಲೇಶ್ವರ ನಗರ ಬಡಾವಣೆಯಲ್ಲಿ ಶನಿವಾರ ಶ್ರೀ ದೇವರ ದಾಸಿಮಯ್ಯ ದೇವಾಂಗ ಸಂದ ನೂತನ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ 725ಕ್ಕೂ ನೇಕಾರ ಸಮುದಾಯಕ್ಕೆ ಸೇರಿದ ಸಂಘಗಳು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸದಸ್ಯರು ತಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗೂಡಿದರೆ ಮಾತ್ರವೇ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ನೇಕಾರ ಸಮುದಾಯದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿನ ನೆರವು ನೀಡುತ್ತಿದ್ದಾರೆ.ಇದಕ್ಕೆ ಪೂರಕ ಎನ್ನುವಂತೆ ಮಾಸಿಕ ವೇತನವನ್ನು 5 ಸಾವಿರ ರೂ.ಗಳಿಗೆ ಹೆಚ್ಚಿಸಿ ಹಿಂದುಳಿದ ವರ್ಗಗಳ ಬಡವರನ್ನು ಬಲಿಷ್ಠಗೊಳಿಸುವ ಕಾರ್ಯ ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ದೇವಾಂಗ ಸಮುದಾಯ ನಾಡಿನ ಜನರಿಗೆ ತನ್ನದೇ ಕೊಡುಗೆ ನೀಡಿರುವುದು ಶ್ಲಾಘನೀಯ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಸರ್ಕಾರದ ಸವಲತ್ತುಗಳನ್ನು ಪಡೆದು ಪ್ರಗತಿ ಸಾಧಿಸಬಹುದು. ತಾಲೂಕಿನಲ್ಲಿ ಆರಂಭಗೊಂಡಿರುವ ಸಂಘದ ಅಭಿವೃದ್ಧಿಗೆ ಒಂದು ಲಕ್ಷ ರೂ.ದೇಣಿಗೆ ನೀಡುವುದಾಗಿ ಘೋಷಿಸಿದರು.
ಮುಖಂಡ ವೈ.ಕೆ.ದೇವರಾಜ್, ನಗರಸಭೆ ಸದಸ್ಯ ಮೇಲುಗಿರಿಗೌಡ, ಸೋಮಶೇಖರ್, ಕುಲದೀಪ್, ಕೋಳಗುಂದ ಸ್ವಭಾವ ಇತರರು ಇದ್ದರು.