ನೆಸ್ಲೆ ಕಾರ್ಖಾನೆ ಸಾಮಾಜಿಕ ಕಾರ್ಯ ಅನನ್ಯ

26NGD3
ನಂಜನಗೂಡಿನ ಅಶೋಕಪುರಂ ಸರ್ಕಾರಿ ಶಾಲೆಯಲ್ಲಿ ನೆಸ್ಲೆ ಕಾರ್ಖಾನೆ ನಿರ್ಮಿಸಿರುವ ಶೌಚಗೃಹಗಳನ್ನು ಶಾಸಕ ದರ್ಶನ್ ಧ್ರುವನಾರಾಯಣ ಲೋಕಾರ್ಪಣೆಗೊಳಿಸಿದರು. ಶ್ರೀನಿವಾಸಮೂರ್ತಿ, ಕಳಲೆ ಕೇಶವಮೂರ್ತಿ, ಮಂಗಳಮ್ಮ ಇದ್ದರು.
Published on

ನಂಜನಗೂಡು: ಕಾರ್ಪೊರೇಟ್ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಶಿಕ್ಷಣ ಹಾಗೂ ನೈರ್ಮಲ್ಯಕ್ಕೆ ವಿನಿಯೋಗಿಸುವ ಮೂಲಕ ಸ್ಥಳೀಯರ ನೆರವಿಗೆ ನಿಲ್ಲುತ್ತಿರುವುದು ಶ್ಲಾಘನೀಯ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಅಶೋಕಪುರಂ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೆಸ್ಲೆ ಕಾರ್ಖಾನೆಯು ಸಿಎಸ್‌ಆರ್ ಅನುದಾನದಲ್ಲಿ 3.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶೌಚಗೃಹಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ನೆಸ್ಲೆ ಕಾರ್ಖಾನೆ ಸಮುದಾಯಕ್ಕೆ ಅವಶ್ಯಕವಿರುವ ಶೌಚಗೃಹ, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾಪ-ಕಾಲೇಜುಗಳಿಗೆ ಪರಿಕರಗಳನ್ನು ಒದಗಿಸುವಂತಹ ಸೇವೆಯಲ್ಲಿ ತೊಡಗಿಕೊಂಡಿರುವುದು ಉತ್ತಮ ಬೆಳವಣಿಗೆ. ಇದರಿಂದ ಸಾಮಾಜಿಕ ಗುರಿಗಳಿಗೆ ಕೊಡುಗೆ ನೀಡಿದಂತಾಗಿದೆ. ಈ ನಿಟ್ಟಿನಲ್ಲಿ ನೆಸ್ಲೆ ಕಾರ್ಖಾನೆಯು ಈವರೆಗೆ 16,344 ಶೌಚಗೃಹ, ಸುಮಾರು 16,523 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವಿವಿಧ ಭಾಗಗಳಲ್ಲಿ ನಿರ್ಮಿಸಿಕೊಟ್ಟಿರುವುದು ಸಂತಸದ ಸಂಗತಿ ಎಂದರು.
ಇದರ ಜತೆಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ, ಕೃಷಿ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಕೃಷಿಗೂ ಕೊಡುಗೆ ನೀಡುತ್ತಿರುವುದು ಕಂಪನಿಗೆ ಸಮಾಜದ ಮೇಲಿರುವ ಸೇವಾ ಮನೋಭಾವವನ್ನು ತೋರಿಸುತ್ತದೆ. ತಾಲೂಕಿನ ಹಲವಾರು ಸರ್ಕಾರಿ ಶಾಲೆಗಳಲ್ಲಿ ಶೌಚಗೃಹದ ಕೊರತೆಯಿದೆ. ನೆಸ್ಲೆ ಕಾರ್ಖಾನೆ ಆ ಕೊರತೆಯನ್ನು ನೀಗಿಸಲು ಮುಂದಾಗಬೇಕೆಂದು ಮನವಿ ಮಾಡುತ್ತೇನೆ ಎಂದರು.

ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ನೆಸ್ಲೆ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಶ್ರೀವಾಸಮೂರ್ತಿ, ನಗರಸಭಾ ಸದಸ್ಯೆ ಮಂಗಳಮ್ಮ, ಬಿಇಒ ಶಿವಲಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರತ್ನಾಕರ, ಮುಖ್ಯಶಿಕ್ಷಕ ಮುದ್ದುಮಾದೇಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net