ನೆಲಹಾಳ್, ಹಿರೇಹಳ್ಳಿ ಗ್ರಾಪಂಗಳಲ್ಲಿ ಲಾಟರಿ ಲಕ್ ; ಲಕ್ಷ್ಮಮ್ಮ, ಭಾಗ್ಯಗೆ ಒಲಿದ ಅದೃಷ್ಟ ; ಕೆಲ ಪಂಚಾಯಿತಿಗಳಲ್ಲಿ ಅವಿರೋಧ ಆಯ್ಕೆ

05Tmk_GP_Tmk
Published on

ತುಮಕೂರು ; ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆಲಹಾಳ್ ಹಾಗೂ ಹಿರೇಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನವನ್ನು ‘ಲಾಟರಿ’ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ನೆಲಹಾಳ್ ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲಕ್ಷ್ಮಮ್ಮ ಹಾಗೂ ಹಿರೇಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಭಾಗ್ಯಗೆ ಬಂಪರ್ ಲಾಟರಿ ಹೊಡೆಯಿತು.

14 ಸದಸ್ಯಬಲವುಳ್ಳ ನೆಲಹಾಳ್ ಗ್ರಾಪಂನಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಲಕ್ಷ್ಮಮ್ಮ 7 ಮತ ಹಾಗೂ ಜೆಡಿಎಸ್ ಬೆಂಬಲಿತ ಬಾಲಕೃಷ್ಣ 7 ಮತಗಳಿಸಿದ್ದು ಲಾಟರಿ ಮುಖೇನ ಆಯ್ಕೆ ಮಾಡಲು ನಿರ್ಧರಿಸಲಾಯಿತು. ಲಕ್ಷ್ಮಮ್ಮಗೆ ಅದೃಷ್ಟ ಒಲಿಯಿತು. ಬಿಸಿಎಂಎ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಮುದ್ದಮ್ಮ 7 ಮತ ಹಾಗೂ ಜೆಡಿಎಸ್‌ನ ಸಾವಿತ್ರಮ್ಮ ಸಹ 7 ಮತ ಪಡೆದರು. ಕೊನೆಗೆ ಲಾಟರಿ ಅದೃಷ್ಟದಲ್ಲಿ ಸಾವಿತ್ರಮ್ಮ ಗೆಲುವಿನ ನಗೆಬೀರಿದರು.

ಭಾಗ್ಯ ಲಾಟರಿ ಅಧ್ಯಕ್ಷೆ: 22 ಸದಸ್ಯ ಬಲವುಳ್ಳ ಹಿರೇಹಳ್ಳಿ ಗ್ರಾಪಂನಲ್ಲಿ ಬಿಸಿಎಂಎ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಟಿ.ಭಾಗ್ಯಾ 11 ಮತಗಳನ್ನು ಜೆಡಿಎಸ್ ಬೆಂಬಲಿತ ಅಶ್ರಫ್‌ಉನ್ನಿಸಾ 11 ಮತಗಳನ್ನು ಪಡೆದರು. ಕೊನೆಗೆ ಲಾಟರಿಯಲ್ಲಿ ಭಾಗ್ಯ ಅಧ್ಯಕ್ಷರಾದರು. ಜೆಡಿಎಸ್ ಬೆಂಬಲಿತ ಓರ್ವ ಸದಸ್ಯರು ಬಿಜೆಪಿ ಬೆಂಬಲಿಸಿದ್ದು ಜೆಡಿಎಸ್‌ಗೆ ಅದೃಷ್ಟ ಕೈಕೊಟ್ಟಿತು. ಎಸ್ಸಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯೆ ನಾಗರತ್ನಮ್ಮ 12 ಮತಪಡೆದರೆ ಬಿಜೆಪಿ ಬೆಂಬಲಿತೆ ರಮ್ಯಾ 11 ಮತಗಳಿಸಿದರು. ನಾಗರತ್ನಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಮಸ್ಕಲ್ ಗ್ರಾಪಂ ಅಧ್ಯಕ್ಷರಾಗಿ ಕೆ.ಬಿ.ಗಂಗರಾಜು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುನಂದಮ್ಮ ಚುನಾಯಿತರಾದರು. ಹೊಳಕಲ್ ಗ್ರಾಪಂ ಅಧ್ಯಕ್ಷರಾಗಿ ಕಲ್ಪನಾ, ಉಪಾಧ್ಯಕ್ಷರಾಗಿ ಎಚ್.ಎ.ಆಂಜಿನಪ್ಪ ಹಾಗೂ ಹೆತ್ತೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಎ.ಧನಲಕ್ಷ್ಮೀ ಹಾಗೂ ಉಪಾಧ್ಯಕ್ಷರಾಗಿ ಕೆ.ಆರ್.ಉಮಾಶಂಕರ್ ಚುನಾಯಿತರಾದರು.

21 ಸದಸ್ಯ ಬಲವುಳ್ಳ ಊರ್ಡಿಗೆರೆ ಗ್ರಾಪಂ ಅಧ್ಯಕ್ಷರಾಗಿ ಗಂಗಾಧರಯ್ಯ, ಉಪಾಧ್ಯಕ್ಷರಾಗಿ ಆರ್.ವಿ.ತಾರಾದೇವಿ ಅವಿರೋಧ ಆಯ್ಕೆಯಾದರು. ಕೆಸ್ತೂರು ಗ್ರಾಪಂ ಅಧ್ಯಕ್ಷರಾಗಿ ಪಿ.ರೇವತಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ರಾಗಿ ಎನ್.ಪವಿತ್ರ ಚುನಾಯಿತರಾದರು. ಬೆಳಧರ ಗ್ರಾಪಂ ಅಧ್ಯಕ್ಷರಾಗಿ ಇಂದ್ರಮ್ಮ, ಉಪಾಧ್ಯಕ್ಷರಾಗಿ ಎನ್.ಎಸ್.ನಾಗರಾಜು, ಊರುಕೆರೆ ಗ್ರಾಪಂ ಅಧ್ಯಕ್ಷರಾಗಿ ಉಮಾಮಹೇಶ್ವರ, ಉಪಾಧ್ಯಕ್ಷರಾಗಿ ಬಿ.ಎಸ್.ಲಲಿತಮ್ಮ ಚುನಾಯಿತರಾದರು.

ಬೆಳ್ಳಾವಿ ಗ್ರಾಪಂ ಅಧ್ಯಕ್ಷರಾಗಿ ಕೆ.ಜೆ.ಮಹಾಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ಆರ್.ಎಸ್.ಮಲ್ಲಿಕಾರ್ಜುನ್ ಹಾಗೂ ಸೋರೆಕುಂಟೆ ಗ್ರಾಪಂ ಅಧ್ಯಕ್ಷರಾಗಿ ಎಸ್.ಕೃಷ್ಣಮೂರ್ತಿ, ಉಪಾಧ್ಯಕ್ಷರಾಗಿ ಸಿದ್ದಗಂಗಮ್ಮ ಚುನಾಯಿತರಾದರು.

ಅವಿರೋಧ ಆಯ್ಕೆ: ಬಳ್ಳಗೆರೆ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಬಿಜೆಪಿ ಬೆಂಬಲಿತ ಬಿ.ಎಂ.ಕಲಾವತಿ ಹಾಗೂ ಎಸ್ಸಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಗಿರಿಜಾ, ಅರಿಯೂರು ಗ್ರಾಪಂ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಿದ್ದು ಗೀತಮ್ಮ ಹಾಗೂ ಬಿಸಿಎಂಎಗೆ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ಹಾಗೂ ಸಿರಿವರ ಗ್ರಾಪಂ ಅಧ್ಯಕ್ಷ ಸ್ಥಾನ ಬಿಸಿಎಂಎಗೆ ಮೀಸಲಿದ್ದು ನರಸಿಂಹಮೂರ್ತಿ ಹಾಗೂ ಸಾಮಾನ್ಯ ಮಹಿಳಗೆ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಸುಶೀಲಮ್ಮ ಅವಿರೋಧವಾಗಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net