

ಚೇಳೂರು (ಗುಬ್ಬಿ): ಆಧುನಿಕತೆಯ ಅಬ್ಬರದಲ್ಲಿ ನೆಲಮೂಲ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು ಎಂದು ಗುಬ್ಬಿ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಹೇಳಿದರು.
ಚೇಳೂರು ಎಪಿಎಂಸಿ ಸಭಾಂಗಣದಲ್ಲಿ ನಿರ್ಮಿಸಿದ್ದ ಗುಬ್ಬಿ ಮಲ್ಲಣಾರ್ಯ ವೇದಿಕೆಯಲ್ಲಿ ಜಿಲ್ಲಾ ಕಸಾಪ, ತಾಲೂಕು ಹಾಗೂ ಹೋಬಳಿ ಕಸಾಪ ಘಟಕಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಐದನೇ ಗುಬ್ಬಿ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆವಹಿಸಿ ಮಾತನಾಡಿದರು. ಪ್ರತೀ ಮನೆಯಲ್ಲಿಯೂ ಸಾಹಿತ್ಯ, ಸಂಸ್ಕೃತಿ, ಸಂಸ್ಕಾರಗಳು ಇದ್ದೇ ಇರುತ್ತವೆ. ಅದನ್ನು ನಾವು ಬಳಸಿಕೊಳ್ಳುವುದರ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.
ನನ್ನವ್ವ ರಾಗಿ ಬೀಸುವಾಗ ಹಾಡುತ್ತಿದ್ದ ಅದೇಷ್ಟೊ ರಾಗಿ ಪದಗಳು ನಮಗೆ ತಿಳಿದಿರಲಿಲ್ಲ. ಶಿಕ್ಷಣದ ಮೂಲಕ ಜ್ಞಾನ ಸಿಕ್ಕ ಮೇಲೆ ಅವರು ಕಟ್ಟಿದಂತಹ ಜನಪದ ಹಾಡುಗಳು ಅರ್ಥವಾಗುತ್ತಿದೆ. ನನ್ನಲ್ಲಿ ಜನಪದ ಸಾಹಿತ್ಯ ಆಸಕ್ತಿ ಬೆಳೆಯುಲು ಇದು ಕಾರಣ. ನಮ್ಮ ಸುತ್ತಮುತ್ತಲೇ ಸಾಕಷ್ಟು ಸಾಹಿತಿಗಳು, ಕವಿಗಳು, ರಂಗಭೂಮಿ, ಯಕ್ಷಗಾನ ಕಲಾವಿದರಿದ್ದು ಓದುಬರಹ ಗೊತ್ತಿಲ್ಲದವರೂ ಕಟ್ಟಿದ ಪದಗಳು ಅಕ್ಷರಬಲ್ಲ ಸಾಹಿತಿಗಳಿಗೆ ಸ್ಫೂರ್ತಿಯಾಗಿವೆ ಎಂದರು.
ಆಧುನಿಕತೆಯ ಆರ್ಭಟದಲ್ಲಿ ಕನ್ನಡದ ಅನೇಕ ಪದಗಳು ಕಣ್ಮರೆಯಾಗುತ್ತಿದ್ದು ಅವುಗಳನ್ನು ಈಗಿನ ಪೀಳಿಗೆಗೆ ತಿಳಿಸಿ ಕೊಡುವ ಅಗತ್ಯವಿದೆ. ಕನ್ನಡ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಇಂಗ್ಲೀಷ್ ವ್ಯಾಮೋಹಕ್ಕೆ ಸಿಲುಕಿ ಮಕ್ಕಳನ್ನು ಕಾನ್ವೆಂಟ್‌ಗೆ ಕಳುಹಿಸುವ ಪರಿಪಾಠ ನಿಲ್ಲಬೇಕು. ಕನ್ನಡ ಮಾಧ್ಯಮದಲ್ಲೇ ಓದುವ ವಾತಾವರಣನ್ನು ನಿರ್ಮಿಸಬೇಕಿದೆ ಎಂದು ತಿಳಿಸಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ಮುಖ್ಯಸ್ಥ ಗುರುಲಿಂಗಯ್ಯ, ಕೆಳಸ್ತರದ ಜಾನಪದ ಸಾಹಿತ್ಯವನ್ನು ಹೆಕ್ಕಿ ಸಮಾಜಕ್ಕೆ ನೀಡಿ ಗೌರವ ತಂದು ಕೊಟ್ಟಿರುವ ಡಾ.ಚಿಕ್ಕಣ್ಣ ಎಣ್ಣೆಕಟ್ಟೆಯವರು ಸಮ್ಮೇಳನದ ಅಧ್ಯಕ್ಷರಾಗಿರುವುದು ತಳ ಸಮುದಾಯಗಳಿಗೆ ನೀಡಿದ ಮನ್ನಣೆಯಾಗಿದೆ. ವ್ಯಕ್ತಿಯು ಸಾಧನೆಯಿಂದ ಉನ್ನತ ಗೌರವವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಧ್ವಜಾರೋಹಣ: ಬೆಳಗ್ಗೆ 8ಕ್ಕೆ ತಹಸೀಲ್ದಾರ್ ಬಿ.ಆರತಿ ರಾಷ್ಟ್ರಧ್ವಜಾರೋಹಣ, ಗ್ರಾಪಂ ಅಧ್ಯಕ್ಷ ಕೆ.ಜಿ.ರಂಗಸ್ವಾಮಯ್ಯ ನಾಡ ಧ್ವಜಾರೋಹಣ ನೆರವೇರಿಸಿದರು.
ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ನಾಗಪ್ಪ, ಸಾಹಿತಿ ಎಚ್.ಕೆ ನರಸಿಂಹಮೂರ್ತಿ, ಡಾ.ಬಿ.ನಂಜುಂಡಸ್ವಾಮಿ, ಮುಖಂಡರಾದ ಜಿ.ಎಸ್. ಪ್ರಸನ್ನ ಕುಮಾರ್, ಜಿ.ಎನ್.ಬೆಟ್ಟಸ್ವಾಮಿ, ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಬಾಬು , ಸೋಮಶೇಖರ್, ಕರಿಯಪ್ಪ, ಗುರುಲಿಂಗಯ್ಯ, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.
ಬಾಲ್ಯದ ನೆನಪು: ಈ ಸಮ್ಮೇಳನದಿಂದ ಬಾಲ್ಯದ ಬದುಕನ್ನು ನೆನಪಿಸಿಕೊಳ್ಳಲು ಸಾಧ್ಯವಾಯಿತು. ನನ್ನೂರಿನಲ್ಲಿ ಸಿಕ್ಕ ಗೌರವ ಬೇರೆಲ್ಲಾ ಗೌರವಗಳಿಗಿಂತ ಇದು. ನಾನೆಂದೂ ಋಣಿಯಾಗಿರುತ್ತೇನೆ. ಚೇಳೂರು ಭಾಗದಲ್ಲಿ ಸಾಹಿತ್ಯದ ಚಿಂತನೆಗಳನ್ನು ರೂಢಿಸಿಕೊಳ್ಳಲು ಕಾರಣವಾದರೆ ಶಿರಾ ಸೀಮೆಯಲ್ಲಿ ಅವುಗಳನ್ನು ಕಾರ್ಯಕರ್ತಗೊಳಿಸಿಕೊಳ್ಳುತ್ತಿದ್ದೇನೆ. ಜಾನಪದ ಕಾಳಜಿಯನ್ನು ಕೊನೆಯ ಉಸಿರಿರುವರೆಗೂ ಇಟ್ಟುಕೊಂಡಿರುತ್ತೇನೆ. ನೆಲ ಮೂಲ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು ಎಂದು ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಬಾಲ್ಯದ ನೆನಪು ಮಾಡಿಕೊಂಡು ಭಾವುಕರಾದರು.
ಸಾಹಿತ್ಯದ ಕಂಪನ್ನು ಗ್ರಾಮೀಣ ಪ್ರದೇಶಗಳಿಗೂ ಕೊಂಡೊಯ್ಯುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಹೋಬಳಿಗಳಲ್ಲಿಯೂ ಸಮ್ಮೇಳನಗಳನ್ನು ಆಯೋಜಿಸಲು ಪರಿಷತ್ತು ಕಾರ್ಯೋನ್ಮುಖವಾಗಿದೆ.
> ಕೆ.ಎಸ್.ಸಿದ್ದಲಿಂಗಪ್ಪ ಜಿಲ್ಲಾಧ್ಯಕ್ಷ ಕಸಾಪ
ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಬೇಕಿದೆ. ಎಲ್ಲರೂ ಒಟ್ಟಾಗಿದ್ದಲ್ಲಿ ನೆಲ, ಜಲ, ಭಾಷೆ , ಸಾಹಿತ್ಯವನ್ನು ಉಳಿಸಿ ಬೆಳೆಸಲು ಸಾಧ್ಯ. ಇಂದಿನ ಪೀಳಿಗೆ ದೇಹ ದಂಡಿಸದೆ ಸುಲಭ ಬದುಕನ್ನು ಕಟ್ಟಿಕೊಳ್ಳುವತ್ತ ಚಿಂತಿಸುತ್ತಿರುವುದು ವಿಪರ್ಯಾಸವಾಗಿದೆ. ಪೋಷಕರು ತಮ್ಮ ಮಕ್ಕಳು ಉತ್ತಮ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶಕರಾಗಿರಬೇಕು.
> ಶ್ರೀ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ತೇವಡಿಹಳ್ಳಿ ಮಠ