ನೆಲಮಂಗಲದಾದ್ಯಂತ ಸಂಭ್ರಮದ ಶಿವರಾತ್ರಿ ಆಚರಣೆ, ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

01 Nela ph 02 Devoties Line
Published on

ನೆಲಮಂಗಲ: ನಗರಸಭೆ ವ್ಯಾಪ್ತಿ ಸೇರಿ ತಾಲೂಕಿನಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ನಗರದ ಕವಾಡಿ ಮಠದ ವೀರಭದ್ರೇಶ್ವರ, ಪೇಟೆಬೀದಿ ರುದ್ರೇಶ್ವರ, ಕಾಶಿವಿಶ್ವನಾಥ ದೇವಾಲಯ, ಕೆರೆಏರಿ ಮಹಾಲಿಂಗೇಶ್ವರ, ವಿಜಯನಗರದ ಶಿವಗಣಪತಿ ದೇವಾಲಯ, ಭಿನ್ನಮಂಗಲದ ಐತಿಹಾಸಿಕ ಮುಕ್ತನಾಥೇಶ್ವರ, ತಾಲೂಕಿನ ಶಿವಗಂಗೆ ಗಂಗಾಧರೇಶ್ವರ ದೇವಾಲಯ ಮತ್ತು ಬೇಗೂರು ಬಳಿಯ ಸೋಮೇಶ್ವರ ದೇವಾಲಯದಲ್ಲಿನ ಶಿವಲಿಂಗಗಳಿಗೆ ವಿಶೇಷ ಅಭಿಷೇಕ, ಅಲಂಕಾರ ಮಾಡಿ, ಪೂಜಾಕೈಂಕರ್ಯ ನೆರವೇರಿಸಲಾಯಿತು.

ನಗರದ ಎಲ್ಲ ಶಿವಾಲಯಗಳಿಗೆ ಬೆಳಗಿನಿಂದಲೇ ತಂಡೋಪತಂಡವಾಗಿ ಬಂದ ಭಕ್ತರು ಬಿರುಬಿಸಿಲನ್ನೂ ಲೆಕ್ಕಿಸದೆ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ವಿಶೇಷ ಅಲಂಕಾರಗಳು: ಹಬ್ಬದ ಪ್ರಯುಕ್ತ ಸೋಮವಾರ ಬೆಳಗಿನ ಜಾವದಿಂದಲೇ ಮಹಾರುದ್ರಾಭಿಷೇಕ ನೆರವೇರಿಸಿದ ಆಗಮಿಕರು, ದೇವರಿಗೆ ವಿಶೇಷ ಅಲಂಕಾರ ಮಾಡಿದ್ದು, ಭಕ್ತರ ಕಣ್ಮನ ಸಳೆಯಿತು. ಭಿನ್ನಮಂಗಲ ಮುಕ್ತನಾಥೇಶ್ವರ ದೇವಾಲಯ ಪರಶಿವನ ನಾಗಭೂಷಣಾಲಂಕಾರ ಆಕರ್ಷಣೀಯವಾಗಿತ್ತು. ವಿವಿಧೆಡೆ ದೇವಾಲಯ ಸಮಿತಿ ಹಾಗೂ ಭಕ್ತರ ಸಹಕಾರದಿಂದ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮುಕ್ತನಾಥೇಶ್ವರ ದೇವಾಲಯದಲ್ಲಿ ಬುಧವಾರ ಬೆಳಗ್ಗೆ 6.30ಕ್ಕೆ ಲೋಕಕಲ್ಯಾಣಾರ್ಥ ಚಂಡಿಕಾಹೋಮ ಹಾಗೂ ಮಹಾರುದ್ರಹೋಮ ಆಯೋಜನೆಗೊಂಡಿವೆ. ಪೂರ್ಣಾಹುತಿ ಬಳಿಕ ಬೆಳಗ್ಗೆ 11.30ಕ್ಕೆ ಮಹಾಮಂಗಳಾರತಿ ಮಾಡಿ, ಪ್ರಸಾದ ವಿತರಣೆ ಮಾಡಲಾಗುವುದು ಎಂದು ದೇವಾಲಯ ಸಮಿತಿ ಬಿ.ಜಿ. ವಾಸು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net