

ನೆಲಮಂಗಲ: ಸರ್ಕಾರದ ಯೋಜನೆಯನ್ನು ಪ್ರತಿ ಲಾನುಭವಿಯೂ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ನಗರದ ರಾಯನ್ ನಗರದಲ್ಲಿ ಶನಿವಾರ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಸರ್ವರಿಗೂ ಸೂರು ಯೋಜನೆಯಡಿ ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಯನ್‌ನಗರ, ಜಯನಗರ, ಇಂದಿರಾನಗರ, ಚನ್ನಪ್ಪಕಲ್ಯಾಣಿ ಪ್ರದೇಶವನ್ನು ಕೊಳೆಗೇರಿ ಪ್ರದೇಶವಾಗಿ ಗುರುತಿಸಲಾಗಿದ್ದು, ಸುಮಾರು 200 ಮನೆಗಳನ್ನು ನಿರ್ಮಾಣ ಮಾಡುವ ಯೋಜನೆ ಚಾಲನೆ ನೀಡಲಾಗಿದೆ ಎಂದರು.
ಪ್ರತಿಯೊಂದು ಮನೆಗೆ ಸುಮಾರು 6.69 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಈ ಹಣದ ಪೈಕಿ 3.5 ಲಕ್ಷ ರೂ. ಸಹಾಯಧನ ನೀಡಲಾಗುವುದು. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪಂಗಡದವರು 2.52 ಲಕ್ಷ ರೂ., ಇತರ ಸಮುದಾಯದವರು 3 ಲಕ್ಷ ರೂ.ಗಳನ್ನು ಸಾಲದ ರೂಪದಲ್ಲಿ ಮರುಪಾವತಿಸಬೇಕು ಎಂದರು.
1 ಸಾವಿರ ಮನೆ ನಿರ್ಮಾಣ: ನಗರದಲ್ಲಿ ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಈಗಾಗಲೇ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮನೆಗಳನ್ನು ನಿರ್ಮಾಣಕ್ಕೆ ಚರ್ಚಿಸಿದ್ದು, 200 ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಜತೆಗೆ ನಗರದಲ್ಲಿ ಸುಮಾರು 3 ಎಕರೆ ಪ್ರದೇಶವನ್ನು ಗುರುತಿಸಿದ್ದು, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಸುಮಾರು ಎರಡು ಅತಸ್ಥಿತ 1 ಸಾವಿರ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಡಾ.ಕೆ.ಶ್ರೀನಿವಾಸಮೂರ್ತಿ ಮಾಹಿತಿ ನೀಡಿದರು.
ರಾಯನ್‌ನಗರ 40, ಜಯನಗರ 65, ಚನ್ನಪ್ಪಕಲ್ಯಾಣಿ ಪ್ರದೇಶದಲ್ಲಿ 35, ಇಂದಿರಾನಗರದಲ್ಲಿ 60 ಮನೆಯನ್ನು ಗುರುತಿಸಲಾಗಿದೆ. ಪ್ರತಿಯೊಂದು ಮನೆಗೂ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಕಚೇರಿ ಸಿಬ್ಬಂದಿ ಭೇಟಿ ಮಾಡಿ ದಾಖಲೆ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು ಎಂದು ಕರ್ನಾಟಕ ಕೋಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲ ಅಭಿಯಂತ ಹನುಮಂತರೆಡ್ಡಿ ಮಾಹಿತಿ ನೀಡಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಅಭಿಯಂತರ ಎಚ್.ಜಿ.ಕಾರ್ತಿಕ್, ರವಿಕುಮಾರ್, ನಗರಸಭೆ ಸದಸ್ಯ ಅಂಜನಪ್ಪ, ನಾಮನಿರ್ದೇಶಿತ ಸದಸ್ಯ ಮುನಿರಾಜು, ಕೃಪಾನಂದ, ಕೆ.ವಸಂತ್‌ಕುಮಾರ್, ಪೌರಾಯುಕ್ತ ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಮ್ಮ, ಮಾಜಿ ಉಪಾಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ, ಮಾಜಿ ಸದಸ್ಯ ಕೆಂಪರಾಜು, ಗಂಗಬೈಲ್ಲಪ್ಪ, ಮುಖಂಡ ಎಂ.ಎನ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.