ನೆಲಮಂಗಲದಲ್ಲಿ ಅಸ್ತವ್ಯಸ್ತಗೊಂಡ ಜನಜೀವನ

11111
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ನಗರದಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಮಂಗಳವಾರ ಮಧ್ಯಾಹ್ನ ಸುರಿದ ಗುಡುಗು ಸಹಿತ ಮಳೆಯಿಂದಾಗಿ ರಾಜಕಾಲುವೆಗಳು ತುಂಬಿ ಹರಿದು ಗಜಾರಿಯಾ, ಚೆನ್ನಪ್ಪ, ಶೇಷು, ಬೈರವೇಶ್ವರ ಬಡಾವಣೆಗಳಿಗೆ ಜಲದಿಗ್ಬಂಧನವಾಗಿದೆ.

ಮೂರ‌್ನಾಲ್ಕು ದಿನಗಳಿಂದಲೂ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ರಸ್ತೆಗಳೂ ಜಲಾವೃತ: ಗಂಟೆಗಟ್ಟಲೆ ಸುರಿದ ಜೋರು ಮಳೆಗೆ ನಗರದ ಎಂ.ಜಿ.ರಸ್ತೆ, ವಾಜರಹಳ್ಳಿರಸ್ತೆ, ಭಕ್ತನಪಾಳ್ಯದ ರಸ್ತೆಗಳಲ್ಲಿ ನೀರು ನಿಂತು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ನಗರದ ಎಂ.ಜಿ.ರಸ್ತೆ, ಬಸವನಹಳ್ಳಿ ರೈಲ್ವೆ ಸೇತುವೆ, ಭಕ್ತನಪಾಳ್ಯದ ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾಗಿರುವ ವಿಚಾರ ತಿಳಿದ ನಗರಸಭೆ ಪೌರಾಯುಕ್ತ ಎಚ್.ಎಂ.ಮನುಕುಮಾರ್, ಎಇಇ ನಾಗಲಿಂಗ ಬಡೀಗೇರ್ ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೆ, ಜೆಸಿಬಿ ಯಂತ್ರಗಳ ಸಹಾಯದಿಂದ ರಸ್ತೆಗಳಲ್ಲಿನ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ರಾಜಕಾಲುವೆ ಒತ್ತುವರಿ: ಜನವಸತಿ ಬಡಾವಣೆಗಳಲ್ಲಿ ನೀರು ನುಗ್ಗಿ ಅವಾಂತರಕ್ಕೆ ಕಾರಣವಾಗಿರುವ ಬಡಾವಣೆಗಳಲ್ಲಿ ಹಾದುಹೋಗಿರುವ ಮುಖ್ಯ ರಾಜಕಾಲುವೆ ಒತ್ತುವರಿಯಾಗಿದ್ದು, ಇದುವರೆಗೂ ತೆರವುಗೊಳಿಸದಿರುವುದು ಮಳೆಗಾಲದಲ್ಲಿನ ಅವಾಂತರಕ್ಕೆ ಕಾರಣವಾಗಿದೆ. ನಗರದ ಚೆನ್ನಪ್ಪ ಬಡಾವಣೆ ಹಾಗೂ ಶೇಷು ಬಡಾವಣೆಯಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ್ದಲ್ಲದೇ ನೀರಿನ ತೊಟ್ಟಿಗಳಲ್ಲಿ ತುಂಬಿದ್ದ ಮಳೆಯ ನೀರು ಹೊರ ಹಾಕಲು ಪರದಾಡಬೇಕಾಯಿತು.

ಪ್ರತಿ ವರ್ಷ ಮಳೆಗಾಲದಲ್ಲಿ ಕೆಲ ವಸತಿ ಪ್ರದೇಶಗಳು ಜಲಾವೃತಗೊಳ್ಳುತ್ತಿದ್ದು ಜನರಲ್ಲಿ ಮಳೆಯ ಭೀತಿ ಆವರಿಸಿದೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಮರ: ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಮರ ಬಿದ್ದು ವಾಹನ ಸವಾರರು ಪರದಾಡಿದ್ದಾರೆ. ಬೆಂಗಳೂರು ಉತ್ತರ ತಾಲೂಕು ಗೋಪಾಲಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಸರಘಟ್ಟ ಮುಖ್ಯರಸ್ತೆ ಶ್ಯಾಮಭಟ್ಟರಪಾಳ್ಯ ಹಾಗೂ ತೋಟಗೆರೆ ಗ್ರಾಮದ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಬಿದ್ದಿದ್ದರಿಂದ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಸಂಚಾರ ಕಷ್ಟವಾಗಿ ಮಾಡುವವಾಹನ ಸವಾರರು ಪರದಾಡಿದರು. ಸಾರ್ವಜನಿಕರ ಮನವಿ ಮೇರೆಗೆ ಪೊಲೀಸರು, ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮರ ತೆರವು ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net