ನೆಲಮಂಗಲ ನಗರಸಭೆಗೆ ಗ್ರಹಣ, ಜನರ ಸಮಸ್ಯೆಗೆ ಸಿಗುತ್ತಿಲ್ಲ ಪರಿಹಾರ 136 ಹುದ್ದೆಗಳು ಖಾಲಿ

07 Nela ph 03 Nelamangala City Municipal Council Office
Published on

ಸುಗ್ಗರಾಜು ಜಿ.ಕೆ. ನೆಲಮಂಗಲ

ನೆಲಮಂಗಲ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿ 2 ವರ್ಷ ಕಳೆದರೂ ನಾಗರಿಕರ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯದೆ, ಅಭಿವೃದ್ಧಿಯೂ ಕಾಣದೆ ನಗರಸಭೆಗೆ ಗ್ರಹಣ ಹಿಡಿದಂತಾಗಿದೆ.

ಪ್ರಸ್ತುತ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿದ್ದರೂ ಆಡಳಿಯ ಮಂಡಳಿ ರಚಿಸದ ಪರಿಣಾಮ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದಾರೆ. ನಗರಸಭೆಯಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರ ಅನೇಕ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತಿಲ್ಲ. ನಿಯಮಾನುಸಾರ ನಗರಸಭೆಯಲ್ಲಿರಬೇಕಾದ 236ಕ್ಕೂ ಹುದ್ದೆಗಳ ಪೈಕಿ 100 ಹುದ್ದೆಗಳಲ್ಲಿ ಸಿಬ್ಬಂದಿ ಇದ್ದು, 136 ಹುದ್ದೆಗಳು ಖಾಲಿ ಇವೆ.

ಸಾರ್ವಜನಿಕರ ಆರೋಪ: ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ನಗರಕ್ಕೆ ಭೇಟಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜನರ ಸಮಸ್ಯೆ ಆಲಿಸಿಲ್ಲ. ಅಧಿಕಾರಿ, ಸಿಬ್ಬಂದಿ ಕೊರತೆಯಿಂದಾಗಿ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಚೇರಿ ಸಮಸ್ಯೆ, ಕಾರ್ಯದೊತ್ತಡ: ರಾಜ್ಯ ರಾಜಧಾನಿಯ ಹೆಬ್ಬಾಗಿಲಿನಂತಿರುವ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ನಗರಸಭಾ ಕಾರ್ಯಾಲಯ ಇಲ್ಲ. ಆಡಳಿತ ಮಂಡಳಿ ರಚನೆಯಾಗದಿರುವುದನ್ನು ಮನಗಂಡಿರುವ ಕೆಲ ಅಧಿಕಾರಿಗಳು ನೂತನ ನಗರಸಭೆಯ ಖಾಲಿ ಹುದ್ದೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲ ಅಧಿಕಾರಿಗಳು ಕಾರ್ಯದೊತ್ತಡದಿಂದಾಗಿ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದು, ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ನಿರ್ವಹಣೆ, ನೀರು ಸರಬರಾಜು ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಸಾರ್ವಜನಿಕರ ಕಡತಗಳು ಧೂಳು ಹಿಡಿಯುತ್ತಿವೆ.

ಜನಪ್ರತಿನಿಧಿಗಳ ಎಡವಟ್ಟಿಗೆ ಸಂಕಷ್ಟ: 2019ರ ಜೂನ್‌ನಲ್ಲಿ ಪುರಸಭೆ 23 ಸ್ಥಾನಗಳಿಗೆ ಚುನಾವಣೆ ನಡೆದು, ಜೆಡಿಎಸ್ 13, ಕಾಂಗ್ರೆಸ್ 7 ಬಿಜೆಪಿ 2, ಪಕ್ಷೇತರ 1 ಸೇರಿ ಒಟ್ಟು 23 ಮಂದಿ ಆಯ್ಕೆಯಾಗಿದ್ದರ ನಡುವೆಯೂ ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ಪುರಸಭೆ ಚುನಾಯಿತ ಪ್ರತಿನಿಧಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ ಜನಪ್ರತಿನಿಧಿಗಳ ಎಡವಟ್ಟಿನಿಂದ ಸಾರ್ವಜನಿಕರು ಬಿಕ್ಕಟ್ಟು ಅನುಭವಿಸುವಂತಾಗಿದೆ.

ಅಭಿವೃದ್ಧಿ ಶೂನ್ಯ: ಪುರಸಭೆ ಚುನಾವಣೆಯಲ್ಲಿ ಚುನಾಯಿತರಾಗಿರುವ 23 ಸದಸ್ಯರು 2 ವರ್ಷಗಳಿಂದಲೂ ವಾರ್ಡ್‌ಗಳ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿಲ್ಲ. ಯಾವುದೇ ಅಭಿವೃದ್ಧಿ ಮಾಡಲಾಗಿಲ್ಲ. ಚುನಾಯಿತರ ಮಾತು ಅಧಿಕಾರಿಗಳು ಕೇಳುತ್ತಿಲ್ಲ. ಸಿಬ್ಬಂದಿ ಕೊರತೆಯಿಂದಾಗಿ ನಗರಸಭೆ ವಿಲೀನಗೊಂಡಿರುವ ಪ್ರದೇಶಗಳ ಜನರ ಸಮಸ್ಯೆಗಳಲ್ಲಿ ಆಲಿಸುವವರು ಇಲ್ಲದಂತಾಗಿದೆ. ಪುರಸಭೆ ಆಡಳಿತ ಮಂಡಳಿ ಅಧಿಕಾರ ಅವಧಿಯ ಕೊನೆಯಲ್ಲಿ ನಗರಸಭೆ ಮೇಲ್ದರ್ಜೆಗೇರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದ್ದ ಶಾಸಕರು, ರಾಜಕೀಯ ಲಾಭಕ್ಕಾಗಿ ನಾಗರಿಕರನ್ನು ಬಲಿಕೊಟ್ಟಿದ್ದಾರೆ ಎಂದು ನೆಲಮಂಗಲದ ಕೆ.ವಸಂತ್‌ಕುಮಾರ್ ದೂರಿದ್ದಾರೆ.

ನಗರಸಭೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತಾಗಿ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ಇಲ್ಲವಾದಲ್ಲಿ ನಾಗರಿಕರೊಂದಿಗೆ ಸೇರಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ನಡೆಸಲಾಗುವುದು. ನವೀನ್ ವಾಜರಹಳ್ಳಿ, ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆ ಅಧ್ಯಕ್ಷ ನಗರಸಭೆ ವಿಲೀನಗೊಂಡಿರುವ ಪ್ರದೇಶಗಳಲ್ಲಿನ ಕೆಲ ಅನಧಿಕೃತ ವಸತಿ ಬಡಾವಣೆಗಳಲ್ಲಿನ ಆಸ್ತಿಗಳಿಗೆ ನಗರಸಭೆಯಲ್ಲಿ ಖಾತೆ ತೆರೆದು ಹಣ ಮಾಡುವುದರಲ್ಲಿ ಆಸಕ್ತಿವಹಿಸಿರುವ ನಗರಸಭೆ ಅಧಿಕಾರಿಗಳು ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತಿಲ್ಲ ಲೋಕೇಶ್, ನೆಲಮಂಗಲ ನಗರಸಭೆಯಲ್ಲಿ ಅಧಿಕಾರಿ ಸಿಬ್ಬಂದಿ ಕೊರತೆಯಿಂದಾಗಿ ಉದ್ಭವಿಸುತ್ತಿರುವ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಜನಸಂಖ್ಯೆಗೆ ತಕ್ಕಂತೆ ಅಧಿಕಾರಿ, ಸಿಬ್ಬಂದಿ ಇದ್ದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಬಹುದಾಗಿದೆ. ಟಿ.ಮಂಜುನಾಥ್, ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net