

ನೆಲಮಂಗಲ: ರಸ್ತೆ ವಿಸ್ತರಣೆ ಹೆಸರಿನಲ್ಲಿ ಬಡ ಕುಟುಂಬಗಳ ಮನೆಗಳಿಂದ ತೆರವುಗೊಳಿಸಲಾಗುತ್ತಿದೆ ಎಂದು ಆರೋಪಿಸಿ ರೈಲ್ವೆ ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಮೈಲನಹಳ್ಳಿ ಗ್ರಾಮಸ್ಥರು ಗ್ರಾಮದ ಗುಟ್ಟೆ ಪ್ರದೇಶದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನೆಲಮಂಗಲ-ದೊಡ್ಡಬಳ್ಳಾಪುರ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಬರುವ ಮೈಲನಹಳ್ಳಿಯ ಸರ್ಕಾರಿ ಜಾಗಗಳನ್ನು ಆಶ್ರಯ ಯೋಜನೆಯ ನಿವೇಶನಗಳನ್ನಾಗಿ ವಿಂಗಡಿಸಿ, 210 ಲಾನುಭವಿಗಳಿಗೆ 2004ರಲ್ಲಿ ವಿತರಿಸಲಾಗಿದೆ. ನಿವೇಶನ ಪಡೆದವರು ಈಗಾಗಲೇ ಮನೆ ಕಟ್ಟಿಕೊಂಡಿದ್ದಾರೆ. ಈಗ ಈ ರಸ್ತೆಯನ್ನು ವಿಸ್ತರಣೆ ಮಾಡಲು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ 30ಕ್ಕೂ ಹೆಚ್ಚು ಮನೆಗಳ ನಿವಾಸಿಗಳಿಗೆ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದಾಗಿ ಬಡ ಕುಟುಂಬಗಳು ಕಂಗಾಲಾಗಿವೆ ಎಂದು ಅಲವತ್ತುಕೊಂಡರು.
ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ: ಬ್ಯಾಂಕ್‌ನಿಂದ ಸಾಲ ಮಾಡಿ ಮನೆ ನಿರ್ಮಿಸಿಕೊಂಡಿದ್ದೇವೆ. 15 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಈಗ ರಸ್ತೆ ವಿಸ್ತರಣೆ ನೆಪದಲ್ಲಿ ನಮ್ಮನ್ನು ಬೀದಿಪಾಲು ಮಾಡುವುದು ಸರಿಯಲ್ಲ ಎಂದು ಸಂಕಷ್ಟಕ್ಕೆ ತುತ್ತಾಗಲಿರುವ ಮನೆಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮಧ್ಯಪ್ರವೇಶ ಮಾಡಬೇಕು. ಸ್ಥಳ ಪರಿಶೀಲನೆ ಮಾಡಿ ನ್ಯಾಯ ಒದಗಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ನೆಲಮಂಗಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್. ಮಲ್ಲಯ್ಯ, ಗ್ರಾ.ಪಂ. ಉಪಾಧ್ಯಕ್ಷ ಎಂ. ಸತೀಶ್‌ಕುಮಾರ್, ಸದಸ್ಯ ಜಗದಾಂಬಾ ಪುಟ್ಟಸ್ವಾಮಿ, ಪ್ರಶಾಂತ್, ಎಚ್.ಡಿ. ಹರ್ಷ, ಮಾಜಿ ಅಧ್ಯಕ್ಷ ಅಂಜಿನಮೂರ್ತಿ, ಮಾಜಿ ಸದಸ್ಯ ಪಿ. ನಟರಾಜು, ಸಿದ್ದಗಂಗಪ್ಪ, ಮುಖಂಡ ದೀಪಕ್ ಕಿರಣ್, ಪರಶುರಾಮ್, ಮಂಜುನಾಥ್ ಮತ್ತಿತರರು ಇದ್ದರು.
ಹೆದ್ದಾರಿ ಕಾಯ್ದೆಯ ಉಲ್ಲಂಘನೆ: ಲೋಕೋಪಯೋಗಿ ಇಲಾಖೆ ನೆಲಮಂಗಲ-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯನ್ನು ವಿಸ್ತರಿಸಲು 2002ರಲ್ಲೇ ನಿರ್ಧರಿಸಿತ್ತು. ಇದಕ್ಕಾಗಿ ಅದು 40 ಮೀಟರ್ ಅಂತರದ ಜಾಗವನ್ನು ಕಾಮಗಾರಿಗೆ ಮೀಸಲಿಟ್ಟಿತ್ತು. ಆದಾಗ್ಯೂ ಅಧಿಕಾರಿಗಳು ಈ ಜಾಗವನ್ನು ಬಳಸಿಕೊಂಡು 2004ರಲ್ಲಿ ನಿವೇಶನಗಳನ್ನಾಗಿ ಪರಿವರ್ತಿಸಿ ಆಶ್ರಯ ನಿವೇಶನಗಳನ್ನಾಗಿ ವಿಂಗಡಿಸಿ ಲಾನುಭವಿಗಳಿಗೆ ವಿತರಿಸಿದ್ದಾರೆ. ಈ ಮೂಲಕ ಅವರು ರಾಜ್ಯ ಹೆದ್ದಾರಿ ಕಾಯ್ದೆ ಉಲ್ಲಂಸಿದ್ದಾರೆ. ಇದರಿಂದಾಗಿ ಬಡಕುಟುಂಬಗಳು ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿವೆ ಎನ್ನಲಾಗಿದೆ.
ನೆಲಮಂಗಲ-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತಿಸಲಾಗುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲಿ 10.3 ಮೀಟರ್‌ನಷ್ಟು ರಸ್ತೆಯನ್ನು ವಿಸ್ತರಿಸಲಾಗುವುದು. ಗ್ರಾಮಸ್ಥರ ಸಮಸ್ಯೆಯನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಹೆಸರು ಹೇಳಲಿಚ್ಛಿಸದ ಅಧಿಕಾರಿ