

ನೆಲಮಂಗಲ: ನಗರ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ವರುಣನ ಆರ್ಭಟ ಭಾನುವಾರವೂ ಮುಂದುವರಿದಿತ್ತು. ಕಳೆದ ನಾಲ್ಕೈದು ದಿನಗಳಿಂದ ಸಂಜೆಯ ವೇಳೆಗೆ ಗಾಳಿ ಸಹಿತ ಮಳೆಯಾಗುತ್ತಿದ್ದು, ತಾಲೂಕಿನ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಜತೆಗೆ ಪಟ್ಟಣದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಜು.19ರ ಬೆಳಗ್ಗೆಯಿಂದ ತುಂತುರು ಮಳೆಯಾಗುತ್ತಿದ್ದು ಸಂಜೆಯ ವೇಳೆಗೆ ಮಳೆರಾಯನ ಆರ್ಭಟಕ್ಕೆ ನಗರದ ಜನತೆ ಸೇರಿ ತಾಲೂಕಿನ ಕೆಲ ಗ್ರಾಮಗಳ ಜನರು ಪರದಾಡುವಂತಾಗಿದೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ನಗರದ ಮುಖ್ಯರಸ್ತೆಯಲ್ಲಿ ಚರಂಡಿಗಳು ತುಂಬಿಕೊಂಡಿದ್ದರಿಂದ, ಮಳೆನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸಬೇಕಾಯಿತು.
ಶನಿವಾರ ಹಾಗೂ ಇಂದು ಭಾನುವಾರ ಕೂಡ ಜೋರಾದ ಮಳೆಯಾಗಿತ್ತು. ತಾಲೂಕು ಸೇರಿದಂತೆ ಬೆಂಗಳೂರು ಉತ್ತರ ತಾಲೂಕಿನ ವಿವಿಧ ಗ್ರಾಮಗಳ ರಸ್ತೆಗಳಲ್ಲಿ, ರೈತರ ಜಮೀನು ಕೆಸರುಗದ್ದೆಯಂತೆ ಆಗಿದ್ದವು. ತಾತ್ಕಾಲಿಕ ಶೆಡ್‌ಗಳು ನೆಲಸಮಯವಾಗಿದ್ದು, ರೈತರು ಮತ್ತು ಸಾರ್ವಜನಿಕರ ಅಸ್ತಿಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ.
ಬಿತ್ತನೆಗೆ ಕಾಯುತ್ತಿರುವ ರೈತ: ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಕೆಲವೆಡೆ ಮಳೆಯಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ರೈತರು ಹೊಲ ಉತ್ತಿ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಆದರೆ, ಮಳೆ ಬಿಡುವು ಕೊಡದ ಕಾರಣ ಬಿತ್ತನೆ ಕಾರ್ಯ ಮುಂದಕ್ಕೆ ಹೋಗುತ್ತಲೇ ಇದೆ.