

ನೆಲಮಂಗಲ: ನಗರಸಭೆ ಸದಸ್ಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿರುವ ಸುಪ್ರೀಂಕೋರ್ಟ್ ಪ್ರಜಾಪ್ರತಿನಿಧಿ ಕಾಯ್ದೆಯಡಿ ಮಾಡಿದ್ದ ಸರ್ಕಾರದ ಆದೇಶ ಹಾಗೂ ಚುನಾಯಿತ ಸದಸ್ಯರ ನಿಲುವನ್ನು ಎತ್ತಿಹಿಡಿದಿದೆ.
ಮುನಿಸಿಪಲ್ ಕಾಯ್ದೆಯಡಿ ಸರ್ಕಾರ ನಿಯಮಾನುಸಾರ ಮೇಲ್ದರ್ಜೆಗೇರಿಸಿರುವ ಸದಸ್ಯರನ್ನು ಒಳಗೊಂಡಂತೆ ವಿಲೀನಗೊಂಡಿರುವ ಪ್ರದೇಶಗಳಿಗೆ ಪುರಸಭೆ ಕಾಯ್ದೆ ಕಲಂ 360(ಡಿ) ಅಡಿ ಹೆಚ್ಚುವರಿ ಕೌನ್ಸಿಲರ್‌ಗಳನ್ನು 2 ವಾರದಲ್ಲಿ ನೇಮಿಸಿ, ನಗರಸಭೆಗೆ ಹೊಸ ಆಡಳಿತ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್ ಅ.28ರಂದು ಆದೇಶ ಹೊರಡಿಸಿದೆ.
ಏನಿದು ಪ್ರಕರಣ: ನೆಲಮಂಗಲ ಪುರಸಭೆಗೆ 2019ರ ಜೂನ್‌ನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ 13 ಕಾಂಗ್ರೆಸ್ 7 ಬಿಜೆಪಿಯ ಇಬ್ಬರು, ಒಬ್ಬ ಪಕ್ಷೇತರು ಸದಸ್ಯರು ಆಯ್ಕೆಯಾಗಿದ್ದರು. ಸರ್ಕಾರ 2019ರ ಡಿ.26ರಂದು ಆದೇಶ ಹೊರಡಿಸಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿತ್ತು. ಬಳಿಕ ಮುನಿಸಿಪಲ್ ಕಾಯ್ದೆಯಡಿ ಪುರಸಭೆಯ ಚುನಾಯಿತ ಸದಸ್ಯರನ್ನೇ ನಗರಸಭಾ ಸದಸ್ಯರಾಗಿ ಮೇಲ್ದರ್ಜೆಗೇರಿಸಿತ್ತು. ಆದರೆ, ಸರ್ಕಾರದ ಈ ಕ್ರಮ ಪ್ರಶ್ನಿಸಿ ಕೆಲವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಹಾಗೂ ದ್ವಿಸದಸ್ಯ ನ್ಯಾಯಪೀಠ ವಿಲೀನಗೊಂಡಿರುವ ಹೊಸ ಪ್ರದೇಶಗಳು ಒಳಗೊಂಡಂತೆ 2 ತಿಂಗಳ ಒಳಗಾಗಿ ನೂತನ ನಗರಸಭೆಯ 31 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಆದೇಶಿಸಿತ್ತು. ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಚುನಾಯಿತ ಸದಸ್ಯರು ಹಾಗೂ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ನ್ಯಾಯಪೀಠ, ವಾದ, ಪ್ರತಿವಾದಗಳನ್ನು ಆಲಿಸಿ ಅ.28ರಂದು ಆದೇಶ ಹೊರಡಿಸಿ, ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ ಮಾತ್ರಕ್ಕೆ ಈಗಾಗಲೇ ಚುನಾಯಿತರಾಗಿರುವ ಸದಸ್ಯರ ಅಧಿಕಾರಾವಧಿಯನ್ನು ಮೊಟಕುಗೊಳಿಸಿ, ಹೊಸದಾಗಿ ಚುನಾವಣೆ ನಡೆಸಬೇಕು ಎಂಬ ಬಗ್ಗೆ ಯಾವುದೇ ನಿಖರ ಕಾಯ್ದೆ ಇಲ್ಲವಾಗಿದೆ. ಇದನ್ನು ಮನಗಂಡು 2 ವಾರದೊಳಗೆ ಪುರಸಭೆ ಕಾಯ್ಡೆಯಡಿ ಮೇಲ್ದರ್ಜೆಗೇರಿರುವ ಚುನಾಯಿತ ಸದಸ್ಯರನ್ನು ಮುಂದುವರಿಸಿ, ವಿಲೀನಗೊಂಡಿರುವ ಹೊಸ ಪ್ರದೇಶಗಳಿಗೆ ಕಲಂ 360(ಡಿ) ಅಡಿ ಹೆಚ್ಚುವರಿ ಕೌನ್ಸಿಲರ್‌ಗಳನ್ನು ನೇಮಿಸಿ, ನಗರಸಭೆ ಆಡಳಿತ ಮಂಡಳಿ ರಚಿಸುವಂತೆ ಹೇಳಿದೆ. ಇದು ಆತಂಕದಲ್ಲಿದ್ದ ಚುನಾಯಿತ ಸದಸ್ಯರಲ್ಲಿ ನಿರಾಳತೆ ತಂದಿದೆ.
ಬಹುಮತವಿದ್ದರೂ ಅಧಿಕಾರಕ್ಕೆ ಜೆಡಿಎಸ್ ವಿರೋಧ: ಒಟ್ಟು 23 ಸದಸ್ಯ ಬಲದ ನಗರಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ಜೆಡಿಎಸ್‌ಗೆ ಬಹುಮತ ಇದೆ. ಆದ್ದರಿಂದ, ಆ ಪಕ್ಷದವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಇಂಥ ಸನ್ನಿವೇಶದಲ್ಲಿ ಜೆಡಿಎಸ್‌ನವರೇ ಆದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಚುನಾಯಿತ ಸದಸ್ಯರ ಸ್ಥಾನವನ್ನು ವಜಾಗೊಳಿಸುವಂತೆ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಲ್ಲದೆ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಹೊಸ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲು ಮುಂದಾಗಿದ್ದರು. ಇದೀಗ ಸುಪ್ರೀಂಕೋರ್ಟ್ ಪ್ರಜಾಪ್ರತಿನಿಧಿ ಕಾಯ್ದೆ ಎತ್ತಿಹಿಡಿದು ಆದೇಶ ನೀಡಿರುವುದು ಸಂತಸ ತಂದಿದೆ ಎಂದು ಜೆಡಿಎಸ್ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷ ಎ. ಪಿಳ್ಳಪ್ಪ ಹೇಳಿದರು.
ಸುಪ್ರೀಂಕೋರ್ಟ್‌ನ ಮಧ್ಯಂತರ ಆದೇಶದಿಂದ ಎರಡೂವರೆ ವರ್ಷಗಳ ನ್ಯಾಯಬದ್ಧ ಹೋರಾಟಕ್ಕೆ ಜಯ ಸಿಕ್ಕಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಆಡಳಿತಮಂಡಳಿ ರಚಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಅಭಿವೃದ್ಧಿ ಕಾರ್ಯಕೈಗೊಳ್ಳಲು ಶಾಸಕರು ಸಹಕರಿಸಬೇಕು. ಸಿ. ಪ್ರದೀಪ್, ನಗರಸಭೆ ಸದಸ್ಯ, ವಕೀಲ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಯಮಾನುಸಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 23 ಮಂದಿಯ ಒಗ್ಗಟ್ಟಿನ ಹೋರಾಟಕ್ಕೆ ಸುಪ್ರೀಂಕೋರ್ಟ್ ನ್ಯಾಯ ಒದಗಿಸಿದೆ. ಸ್ವಪಕ್ಷದ ಶಾಸಕರೇ ಅಡ್ಡಗಾಲು ಹಾಕಿದ್ದರ ನಡುವೆಯೂ ಬಿಜೆಪಿಯ ಮಾಜಿ ಶಾಸಕರು ಸಹಕರಿಸಿದ್ದನ್ನು ಇಲ್ಲಿ ಸ್ಮರಿಸಬೇಕು. ಎನ್.ಪಿ.ಹೇಮಂತಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ