ನೆಲಕ್ಕುರುಳಿದ ಛತ್ರಪತಿ ಶಿವಾಜಿ ಪುತ್ಥಳಿ

h23-Shivaji Statue 1
Published on

ಹುಬ್ಬಳ್ಳಿ: ಇಲ್ಲಿಯ ಮಹಾನಗರ ಪಾಲಿಕೆ ಪ್ರಧಾನ ಕಚೇರಿ ಪಕ್ಕದ ಚಿಟಗುಪ್ಪಿ ಉದ್ಯಾನದಲ್ಲಿಯ ಶಿವಾಜಿ ಮಹಾರಾಜರ ಪುತ್ಥಳಿ ನೆಲಕ್ಕೆ ಬಿದ್ದು ಛಿದ್ರಗೊಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

ಮೂರ್ತಿ ನಿರ್ಮಾಣ ಕಳಪೆಯಾಗಿರುವುದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. 3 ವರ್ಷದ ಹಿಂದೆ ಸ್ಥಾಪಿತ ಅಶ್ವಾರೂಢ ಭಂಗಿಯ ಪುತ್ಥಳಿಯಲ್ಲಿ ಬಿರುಕು ಬಿಟ್ಟಿದ್ದು, ಕೂಡಲೆ ಗಮನ ಹರಿಸಬೇಕು ಎಂದು ಶಿವಾಜಿ ಪುತ್ಥಳಿ ಸ್ಥಾಪನಾ ಸಮಿತಿ, ಮರಾಠ ಸಮುದಾಯದವರು ಹಾಗೂ ಸಾರ್ವಜನಿಕರು ಶಿವಾಜಿ ಜಯಂತಿ ಸಂದರ್ಭದಲ್ಲಿ ಒತ್ತಾಯಿಸಿದ್ದರು.

ಮಂಗಳವಾರ ಪುತ್ಥಳಿ ಕುಸಿದುಬಿದ್ದು ನೆಲಕ್ಕೊರಗಿ, ರುಂಡ, ಮುಂಡ, ಖಡ್ಗ, ಗುರಾಣಿಗಳೆಲ್ಲ ಬೇರೆ ಬೇರೆಯಾದ ವಿಷಯ ತಿಳಿದ ಮರಾಠ ಮತ್ತು ಇತರ ಸಮುದಾಯದ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಕಾಮಗಾರಿ ಕಳಪೆ ಎಂದು ದೂರಿದ್ದರೂ ಇದುವರೆಗೆ ಪಾಲಿಕೆ ಕ್ರಮ ಕೈಗೊಳ್ಳದಿರುವುದು ಅಕ್ಷಮ್ಯ. ಕೂಡಲೆ ಪಾಲಿಕೆ ಅಧಿಕಾರಿಗಳು ಕ್ಷಮೆ ಕೇಳಬೇಕು. ಘಟನೆಯ ಕೂಲಂಕಷ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಹೊಸ ಮೂರ್ತಿಯನ್ನು ಶೀಘ್ರದಲ್ಲಿ ಪ್ರತಿಷ್ಠಾಪಿಸುವ ಕುರಿತು ಲಿಖಿತ ಭರವಸೆ ನೀಡಬೇಕು ಎಂದು ಸಮಾಜದ ಪ್ರಮುಖರಾದ ಸುಬ್ರಹ್ಮಣ್ಯ ಶಿರಕೋಳ, ಕೃಷ್ಣ ಗಂಡಗಾಳೇಕರ, ಬಸವರಾಜ ಶಿಂಧೆ ಸೇರಿ ಹಲವರು ಆಗ್ರಹಿಸಿದರು. ಬಹಳಷ್ಟು ಜನರು ಜಮಾಯಿಸಿದ್ದರಿಂದ ಕೆಲವು ಕ್ಷಣ ಸ್ವಲ್ಪ ಬಿಗುವಿನ ವಾತಾವರಣ ಉಂಟಾಗಿತ್ತು. ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಸಮಾಧಾನಪಡಿಸಿದರು.

ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಸ್ಥಳ ಪರಿಶೀಲಿಸಿದರು. ಮೂರ್ತಿ ಕಲಾಕಾರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲಿ ಟೆಂಡರ್ ಕರೆದು ಹೊಸ ಪುತ್ಥಳಿ ಸ್ಥಾಪಿಸುವ ಕುರಿತು ಲಿಖಿತ ಭರವಸೆ ನೀಡುವುದಾಗಿ ತಿಳಿಸಿದ ಮೇಲೆ ಜನರು ಅಲ್ಲಿಂದ ತೆರಳಿದರು.

ಬೇರೆ ಲೋಹ ಮಿಶ್ರಣ?: ಪ್ರತಿಮೆ ಕಂಚಿನದು ಎಂದು ಹೇಳಲಾಗಿ ದ್ದರೂ, ಬೇರೆ ಲೋಹವನ್ನು ಮಿಶ್ರಣ ಮಾಡಲಾಗಿದೆ ಎಂಬ ಅನುಮಾನಗಳಿವೆ. ಗುಣಮಟ್ಟದ ಕಂಚಿನದಾಗಿದ್ದರೆ ಸೀಳು ಬರುವ, ಮಳೆ-ಬಿಸಿಲು ಇತ್ಯಾದಿ ಕಾರಣದಿಂದ ಶಿಥಿಲಗೊಳ್ಳುವ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂದಿದೆ.

ದೂರು ಸಲ್ಲಿಸಲು ಚಿಂತನೆ: ಕಲಾಕಾರ ನಿರ್ಲಕ್ಷ್ಯಂದ ಪುತ್ಥಳಿ ತಯಾರಿಸಿದ್ದಾನೆ. ಹೀಗಾಗಿ, ಶಿವಾಜಿ ಮೂರ್ತಿ ಭಗ್ನಗೊಂಡು ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಪಾಲಿಕೆಯವರು ಕಲಾಕಾರನ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕು. ಅಲ್ಲದೆ, ಮರಾಠ ಸಮಾಜದಿಂದಲೂ ದೂರು ನೀಡುವ ಕುರಿತು ಚಿಂತಿಸಲಾಗುವುದು ಎಂದು ಮುಖಂಡರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net