ನೆಲಕಚ್ಚಿದ ರಾಗಿ ಬೆಳೆ

0000
Published on

ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯಾದ್ಯಂತ ಎರಡು ದಿನದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ರಾಗಿ ಬೆಳೆ ನೆಲಕಚ್ಚಿದ್ದು, ರೈತರು ಆತಂಕದಲ್ಲಿದ್ದಾರೆ.
ರಾಗಿ, ಅಲಸಂದೆ, ತೊಗರಿ, ಅವರೆ ಮತ್ತಿತರ ಬೆಳೆಗಳಿಗೆ ತೀವ್ರ ಮಳೆ ಕೊರತೆ ಅನುಭಮಿಸುತ್ತಿದ್ದ ರೈತರ ಪಾಲಿಗೆ ಇದೀಗ ಸುರಿಯುತ್ತಿರುವ ಮಳೆಯು ಕಾರ್ಮೋಡ ಕವಿದಂತೆ ಮಾಡಿದೆ. ತೂಬಗೆರೆ-ಮಂಚೇನಹಳ್ಳಿ ರಸ್ತೆಯ ಪಕ್ಕದಲ್ಲಿ ತೂಬಗೆರೆ ರೈತ ವೆಂಕಟೇಶ್ ಎಂಬುವರ ಎರಡು ಎಕರೆ ರಾಗಿ ಬೆಳೆ ಮಳೆಯಿಂದಾಗಿ ಮಕಾಡೆ ಮಲಗಿದ್ದು, ಅಕ್ಕಪಕ್ಕದ ಹೊಲಗಳಲ್ಲಿಯೂ ಬೆಳೆನಾಶವಾಗಿದೆ. ಸಾಲ ಮಾಡಿ ರಾಗಿ ಬಿತ್ತನೆ ಮಾಡಿದ್ದೇವೆ, ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಈಗ ಕಾಳು ಕಟ್ಟುತ್ತಿರುವ ರಾಗಿ ಬೆಳೆ ತೂಕ ಹಾಗೂ ತೇವಾಂಶ ಹೆಚ್ಚಾಗಿರುವ ಕಾರಣ ನೆಲಕ್ಕುರುಳಿದೆ. ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ. ಹಾಕಿದ ಬಂಡವಾಳ ಕೈಗೆ ಬರುತ್ತದೋ ಇಲ್ಲವೋ ಎನ್ನುವ ಅತಂಕ ಕಾಡಲಾರಂಭಿಸಿದೆ, ರಾಗಿ ಜತೆಗೆ ಬಿತ್ತನೆ ಮಾಡಿರುವ ಅಲಸಂದೆ ಅವರೆ ಬೆಳೆಯೂ ಮಳೆಯಿಂದ ಹಾಳಾಗಿದೆ ಎನ್ನುತ್ತಾರೆ ರೈತರು.


ಮಳೆ ಬಾರದಿದ್ದರೂ ಸಮಸ್ಯೆ, ಬಂದರೂ ಸಮಸ್ಯೆಯಾಗಿದೆ. ಬಿತ್ತನೆ ಮಾಡಿರುವ ಬೆಳೆಗಳು ಇದೇ ರೀತಿ ನೆಲಕ್ಕುರುಳುತ್ತಿದ್ದರೆ ಬೆಳೆ ಕೈಗೆ ಸಿಗದಂತಾಗುತ್ತದೆ. ಈಗ ನೆಲಕಚ್ಚಿರುವ ರಾಗಿ ಬೆಳೆಯನ್ನು ನಿಲ್ಲಿಸಿ ಕಟ್ಟುಗಳು ಕಟ್ಟುವ ಮೂಲಕ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಈ ಕೆಲಸ ಮಾಡಲಿಕ್ಕೂ ಕೂಲಿ ಭರಿಸಲೇಬೇಕು, ಅಲ್ಲದೆ ಬೆಳೆ ನೆಲಕ್ಕೆ ತಾಗಿ ಮಣ್ಣಾದರೆ ಮೇವಿನ ಕೊರತೆಯೂ ಎದುರಾಗಲಿದೆ. ಚಿಕ್ಕ ಮುದ್ದೇನಹಳ್ಳಿ, ಲಕ್ಷ್ಮೀದೇವಪುರ, ಲಗುಮೇನಹಳ್ಳಿ, ತುರುವನಹಳ್ಳಿ ಇನ್ನು ಮುಂತಾದ ಕಡೆಗಳಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ರಾಗಿ ಹೊಲಗಳು ನೆಲಕಚ್ಚಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net