

ಹಾಸನ : ಕಾವೇರಿ ವಿಷಯವಾಗಿ ಶ್ರೀಮಠದಿಂದ ಎಲ್ಲ ಸಹಕಾರ ಕೊಡುವಂತೆ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆದೇಶ ಮಾಡಿದ್ದಾರೆ. ನಾಡು, ನುಡಿ ಹಾಗೂ ಜಲದ ವಿಷಯವಾಗಿ ಶ್ರೀಮಠದ ಸಹಕಾರ ಯಾವಾಗಲೂ ಇರುತ್ತದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ನಗರದ ಎಂ.ಜಿ. ರಸ್ತೆ ಬಳಿ ಇರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೆಲ, ಜಲದ ವಿಚಾರ ಬಂದರೆ ಶ್ರೀಮಠದಿಂದ ಯಾವೆಲ್ಲಾ ಸಹಕಾರ ಬೇಕು ಅದನ್ನು ಕೊಡಲು ದೊಡ್ಡ ಮಠದಿಂದ ಆದೇಶ ಮಾಡಲಾಗಿದೆ. ಅವರು ವಿದೇಶದಿಂದ ಬಂದ ಮೇಲೆ ನಾವು ಏನೆಲ್ಲಾ ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಿ ಸಂಪೂರ್ಣ ಸಹಕಾರ ಕೊಡಲಾಗುವುದು ಎಂದು ತಿಳಿಸಿದರು.
ಹಾಸನ ಜಿಲ್ಲೆ, ಮೈಸೂರು ಜಿಲ್ಲೆ, ಮಂಡ್ಯ ಜಿಲ್ಲೆಯ ರೈತಾಪಿ ಜನರ ಕಾವೇರಿ ಸಮಸ್ಯೆ ಬಗೆಹರಿಸುವ ಸಂಬಂಧ ಮಠದ ಸಹಕಾರ ಇದ್ದೇ ಇರುತ್ತದೆ ಎಂಬುದಾಗಿ ನಿರ್ಮಲಾನಂದನಾಥ ಸ್ವಾಮೀಜಿ ಸಂದೇಶ ಕೊಟ್ಟಿದ್ದಾರೆ. ಅವರು ಅಮೆರಿಕದಿಂದ ದೂರವಾಣಿ ಮೂಲಕ ಮಾತನಾಡಿದ್ದಾರೆ. ನಮ್ಮ ಸಂಸ್ಥೆಯಿಂದ ತಮಿಳುನಾಡಿನಲ್ಲಿರುವ ಮಠದ ಸ್ವಾಮೀಜಿಗಳಿಗೆ ತಿಳಿಸಿದ್ದಾರೆ. ಅಮೆರಿಕದಿಂದ ವಾಪಸ್ ಬಂದ ನಂತರ ಕಾವೇರಿ ವಿಚಾರದ ಬಗ್ಗೆ ರೂಪುರೇಷೆಯನ್ನು ಅವರ ಅಧ್ಯಕ್ಷತೆಯಲ್ಲಿ ನಿರ್ಧರಿಸಲಾಗುವುದು ಎಂದರು.
ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವವನ್ನು ಅರ್ಥಪೂರ್ಣವಾಗಿ ಇಷ್ಟು ವರ್ಷಗಳ ದೊಡ್ಡಮಠದಲ್ಲಿ ನಡೆಸಿಕೊಂಡು ಬರಲಾಗಿತ್ತು. ಇದೀಗ ಮೊದಲ ಬಾರಿಗೆ ಹಾಸನ ಮಠದಲ್ಲಿ 50 ವರ್ಷಗಳ ಸುವರ್ಣ ಸಂಭ್ರಮವನ್ನು ಎಲ್ಲರ ಸಹಕಾರದೊಂದಿಗೆ ಕಳೆದ ಮೂರು ದಿನ ಯಶಸ್ವಿಯಾಗಿ ಮಾಡಲಾಗಿದೆ. ಪಟ್ಟಾಭಿಷೇಕ ಮಹೋತ್ಸವದ ಬಗ್ಗೆ ನಿರ್ಮಲಾನಂದನಾಥ ಶ್ರೀಗಳು ಕೂಡ ಶ್ಲಾಘಿಸಿಸಿದ್ದಾರೆ. ಮಠದ ಶ್ರೀಭಕ್ತರು ಮತ್ತು ಮಠದ ಎಲ್ಲಾ ಸದ್ಬಗ್ತ ವೃಂದದವರು, ಹಿರಿಯ ನಾಗರಿಕರ ವೇದಿಕೆ ಸೇರಿದಂತೆ ಎಲ್ಲರೂ ಸೇರಿ ಹಾಸನ ಮಠದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ. ರಾಜ್ಯದ ಮೂಲೆ ಮೂಲೆಗೆ ಈ ಕಾರ್ಯಕ್ರಮ ತಲುಪಿದೆ ಎಂದರು.
ಮೊದಲ ದಿನ ಉಚಿತ ಆಂಬುಲೆನ್ಸ್ ಸೇವೆಗೆ ಪೂಜ್ಯ ಸ್ವಾಮೀಜಿಯವರು ಚಾಲನೆ ಕೊಟ್ಟಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅಮೃತಹಸ್ತದಿಂದ ತ್ರಿಧಾರಾ ಭಾಷಾ ಸಂಗಮ ಸತ್ಪುರುಷರ ಸುಗಂಧ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. 50ನೇ ವರ್ಷದ ಸವಿನೆನಪಿಗಾಗಿ ಇನ್ನು ಮುಂದೆ ಪ್ರತಿವರ್ಷ ಮೂರು ಗ್ರಂಥವನ್ನು ನಮ್ಮ ಜಿಲ್ಲೆಯಲ್ಲಿ ಮೂರು ಹಂತವಾಗಿ ಬಿಡುಗಡೆ ಮಾಡುವ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಮಾಜಿ ಅಧ್ಯಕ್ಷ ಎಚ್.ಬಿ. ಮದನ್‌ಗೌಡ ಉಪಸ್ಥಿತರಿದ್ದರು.