ನೆರೆಪೀಡಿತ ಪ್ರದೇಶ ಘೊಷಣೆಗೆ ಒತ್ತಾಯ

12MDG1 PRATIBHATANE
ಮುಂಡರಗಿ ಪಟ್ಟಣದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ವೈ.ಎನ್. ಗೌಡರ, ದ್ಯಾಮಣ್ಣ ವಾಲಿಕಾರ, ವೀರಯ್ಯ ಡಂಬಳಮಠ, ರಾಮನಗೌಡ ಹಳೇಮನಿ, ಇತರರಿದ್ದರು.
Published on

ಮುಂಡರಗಿ: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಮೀನುಗಳು ಜಲಾವೃತಗೊಂಡಿವೆ. ಮನೆಗಳು ಕುಸಿದಿವೆ, ಜೀವಹಾನಿಯಾಗಿದ್ದು, ರಸ್ತೆಗಳು ಕೊಚ್ಚಿ ಹೋಗಿವೆ. ಆದ್ದರಿಂದ ತಾಲೂಕನ್ನು ನೆರೆ ಪೀಡಿತ ಪ್ರದೇಶವೆಂದು ಘೊಷಿಸಬೇಕು, ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹದಿಂದ ಜಮೀನುಗಳು ಜಲಾವೃತಗೊಂಡು ಭತ್ತ, ಕಬ್ಬು ನಾಶವಾಗಿದೆ. ಅನೇಕ ಕಡೆಗಳಲ್ಲಿ ಕೆರೆ ಕೋಡಿ ಬಿದ್ದು ಜಮೀನುಗಳಿಗೆ ನೀರು ನುಗ್ಗಿ ಬೆಳೆಹಾನಿಯಾಗಿದೆ. ಶೇಂಗಾ, ಗೋವಿನಜೋಳ, ಸೂರ್ಯಕಾಂತಿ, ಹತ್ತಿ, ಉಳ್ಳಾಗಡ್ಡಿ, ತೋಟಗಾರಿಕೆ ಬೆಳೆ ಹಾಳಾಗಿವೆ. ಮನೆಗಳು ಸಹ ಬಿದ್ದೋಗಿದ್ದು, ತೀವ್ರ ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಸರ್ಕಾರ ತಾಲೂಕನ್ನು ನೆರೆ ಪೀಡಿತ ಪ್ರದೇಶವೆಂದು ಘೊಷಿಸಬೇಕು ಎಂದರು.

ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ, ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶಮೂರ್ತಿ ಟಿ.ಸಿ. ಅವರು ರೈತರೊಂದಿಗೆ ರ್ಚಚಿಸಿದರು. ಮಳೆಯಿಂದಾಗಿ ತಾಲೂಕಿನಲ್ಲಿ 4,000 ಹೆಕ್ಟೇರ್ ಹೆಸರು, 2,600 ಹೆಕ್ಟೇರ್ ಗೋವಿನಜೋಳ, 2,500 ಹೆಕ್ಟೇರ್ ಸೂರ್ಯಕಾಂತಿ, 60 ಹೆಕ್ಟೇರ್ ಶೇಂಗಾ ಬೆಳೆಹಾನಿಯಾಗಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.

ಪ್ರಸಕ್ತ ತಾಲೂಕಿನ 48,000 ಹೆಕ್ಟೇರ್​ನಲ್ಲಿ ವಿವಿಧ ಬೆಳೆ ಬೆಳೆಯಾಗಿದೆ. ನಿರಂತರ ಮಳೆಗೆ ಜಮೀನು ಜವುಳು ಹಿಡಿದು ಬೆಳೆ ಹಾನಿಗೊಂಡಿವೆ. ಕೇವಲ 10 ಸಾವಿರ ಹೆಕ್ಟೇರ್ ಬೆಳೆಹಾನಿ ವರದಿ ತಯಾರಿಸಿದ್ದೀರಿ ಎಂದರೆ ಏನು ಅರ್ಥ? ಸರಿಯಾಗಿ ಸರ್ವೆ ಕಾರ್ಯ ನಡೆಸಿ, ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು.

ದ್ಯಾಮಣ್ಣ ವಾಲಿಕಾರ, ವೀರಯ್ಯ ಡಂಬಳಮಠ, ಗೋವಿಂದರೆಡ್ಡಿ ಬೆಣ್ಣಿಹಳ್ಳಿ, ಚಂದ್ರಪ್ಪ ಗದ್ದಿ, ಯಲ್ಲಪ್ಪ ಹೂಲಗೇರಿ, ಪ್ರಧಾನಿ ಕರಿ, ನಿಂಗಪ್ಪ ಹೆಗ್ಗಪ್ಪನವರ, ಫಕೀರಪ್ಪ ಗೌರಿ, ರಾಮನಗೌಡ ಹಳೇಮನಿ, ಮಹೇಶ ಗೌರಿ, ದೇವಪ್ಪ ಬೂದಿಹಾಳ, ಹನುಮಂತಗೌಡ ಕೆಂಚನಗೌಡ್ರ, ರತ್ನವ್ವ ಬಡ್ನಿ, ಹನುಮವ್ವ ನರೇಗಲ್ಲ, ಮಹಾಂತೇಶ ಶಿವನಗೌಡ್ರ, ಕಸ್ತೂರೆವ್ವ ಹೊಸೂರ, ರೇಣುಕಾ ಬಡ್ನಿ, ಮಲ್ಲವ್ವ ಗೌರಿ, ಈಶಪ್ಪ ಸುಲ್ತಾನಪೂರ, ಚಂದ್ರಪ್ಪ ಬಳ್ಳಾರಿ, ಸೋಮನಗೌಡ ಪಾಟೀಲ ಇತರರು ಇದ್ದರು.

ಈಗಾಗಲೇ ಶೇ.90ರಷ್ಟು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮನೆ ಬಿದ್ದಿರುವ ಬಗ್ಗೆ 170 ಅರ್ಜಿಗಳು ಬಂದಿವೆ. ಸದ್ಯ 50 ಮನೆಗಳಿಗೆ ಪರಿಹಾರ ನೀಡಲು ವರದಿ ತಯಾರಿಸಿದ್ದು, ಇನ್ನೂ ವರದಿ ತಯಾರಿಸುವ ಕೆಲಸ ನಡೆದಿದೆ. 90 ಮನೆಗಳಿಗೆ ನೀರು ಜಲಾವೃತಗೊಂಡಿರುವುದು ಪರಿಹಾರ ನೀಡಲು ಕ್ರಮ ವಹಿಸಲಾಗಿದೆ. ಅವಶ್ಯವಿದ್ದರೆ ಗಂಜಿಕೇಂದ್ರ ತೆರೆಯಲಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ಸರಿಪಡಿಸಲಾಗುವುದು.| ಶ್ರುತಿ ಮಳ್ಳಪ್ಪಗೌಡರ, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net