ನೆರೆ ಹಾವಳಿ ತಡೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಿ

11 NRD-2
Published on

ನರಗುಂದ: ಪ್ರಸಕ್ತ ಮುಂಗಾರು ವರ್ಷಧಾರೆ ಭರ್ಜರಿಯಾಗಿ ಸುರಿಯುತ್ತಿದ್ದು, ನವಿಲು ತೀರ್ಥ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಪ್ರವಾಹಕ್ಕೆ ತುತ್ತಾಗುವ ನರಗುಂದ ತಾಲೂಕಿನ ವಿವಿಧ ಗ್ರಾಮಗಳ ಜನ, ಜಾನುವಾರುಗಳ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಎ.ಎಚ್. ಮಹೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ವಿಪತ್ತು ನಿರ್ವಹಣೆ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯ ಖಾನಾಪೂರ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ನವಿಲು ತೀರ್ಥ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣವೂ ಹೆಚ್ಚಳವಾಗಿದೆ. ರಾಜ್ಯ ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಐದು ದಿನಗಳ ಕಾಲ ನಿರಂತರವಾಗಿ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ದೊರೆತಿದೆ. ಹೀಗಾಗಿ ಜಲಾಶಯದಿಂದ ಯಾವುದೇ ಸಂದರ್ಭದಲ್ಲಾದರೂ ನೀರನ್ನು ಹೊರ ಬಿಡುವ ಸಾಧ್ಯತೆ ಇದ್ದು, ಮಲಪ್ರಭಾ ಅಚ್ಚಕಟ್ಟು ಪ್ರದೇಶದ ವಿವಿಧ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಆತಂಕ ಸೃಷ್ಟಿಯಾಗಲಿದೆ ಎಂದರು. ಪ್ರವಾಹ ವೇಳೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲು ಸುರಕ್ಷತಾ ಸ್ಥಳಗಳನ್ನು ಗುರುತಿಸಿಕೊಳ್ಳಬೇಕು. ಮಹಿಳೆಯರು, ಮಕ್ಕಳು, ವಯೋವೃದ್ಧರ ಆರೋಗ್ಯಕ್ಕೆ ಅಗತ್ಯವಿರುವ ಎಲ್ಲ ತಯಾರಿಯನ್ನು ಮಾಡಿಕೊಂಡಿರಬೇಕು. ಅಲ್ಲದೆ, ಪ್ರವಾಹದ ಸಂದರ್ಭದಲ್ಲಿ ಪೊಲೀಸ್ ಹಾಗೂ ತಾಲೂಕಾಡಳಿತದಿಂದ ನೀಡುವ ಎಲ್ಲ ನಿಯಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಎಲ್ಲ ಅಧಿಕಾರಿಗಳು ಜವಾಬ್ದಾರಿಯುತವಾಗಿ ಪಾಲಿಸಬೇಕು ಎಂದು ತಿಳಿಸಿದರು. ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ.ಪಾಟೀಲ, ಅಗ್ನಿ ಶಾಮಕ ಠಾಣಾಧಿಕಾರಿ ಸಂದೀಪ ಬಸರಗಿ, ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ, ಕೆ.ಆರ್. ಆರೇರ, ಮಂಜುನಾಥ ಅಗಸಿಮನಿ ಇದ್ದರು.

ಹಲವು ಗ್ರಾಮಗಳ ಮುಳುಗಡೆ ಸಾಧ್ಯತೆ: ಮಲಪ್ರಭಾ ನದಿಗೆ 30 ಸಾವಿರ ಕ್ಯೂಸೆಕ್ ನೀರು ಬಿಟ್ಟಲ್ಲಿ ತಾಲೂಕಿನ ಲಖಮಾಪೂರ, ಬೆಳ್ಳೇರಿ, ವಾಸನ, ಕೊಣ್ಣೂರ, ಶಿರೋಳ, ಕಪ್ಪಲಿ, ಕಲ್ಲಾಪೂರ ಸೇರಿ ವಿವಿಧ ಗ್ರಾಮಗಳು ಮುಳುಗಡೆ ಆಗಲಿವೆ. ಬೆಣ್ಣೆಹಳ್ಳದ ಪ್ರವಾಹದಿಂದ ಕುರ್ಲಗೇರಿ, ಬನಹಟ್ಟಿ, ಮೂಗನೂರ, ಸುರಕೋಡ, ಹದ್ಲಿ, ಗಂಗಾಪೂರ, ಖಾನಾಪೂರ, ರಡ್ಡೇರ ನಾಗನೂರ ಗ್ರಾಮಗಳು ಪ್ರವಾಹದ ಭೀತಿ ಎದುರಿಸಬೇಕಾಗುತ್ತದೆ. ಆದ್ದರಿಂದ ಎಲ್ಲ ಗ್ರಾಮಸ್ಥರ ಸುರಕ್ಷತೆಗೆ ಮುಂಜಾಗ್ರತೆ ಕ್ರಮವಾಗಿ ಪಿಡಿಒಗಳು ಸೋಮವಾರದಿಂದ ಡಂಗುರ ಹಾಕಿಸಿ ಜಾಗೃತಿ ಮೂಡಿಸಬೇಕು ಎಂದು ತಹಸೀಲ್ದಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net