ನೆರೆ ಎದುರಿಸಲು ಸನ್ನದ್ಧರಾಗಿ

6 smg 1
Published on

ಶಿವಮೊಗ್ಗ: ನೆರೆ ಹಾವಳಿಯಿಂದ ಸಂಭಾವ್ಯ ಅವಘಡ ತಪ್ಪಿಸಲು ಅಗತ್ಯ ಪರಿಹಾರ ಕ್ರಮಕ್ಕೆ ಕಂದಾಯ, ಅರಣ್ಯ, ಮೆಸ್ಕಾಂ ಹಾಗೂ ಅಗ್ನಿಶಾಮಕದಳ ಸೇರಿ ಪ್ರಮುಖ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸನ್ನದ್ಧರಾಗಿರಬೇಕು ಎಂದು ಮೇಯರ್ ಸುವರ್ಣಾ ಶಂಕರ್ ಸೂಚಿಸಿದರು.

ನೆರೆ ನಿಯಂತ್ರಣಕ್ಕೆ ಕೈಗೊಳ್ಳಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ರ್ಚಚಿಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ನೆರೆಯಿಂದ ಯಾರೊಬ್ಬರಿಗೂ ತೊಂದರೆ ಉಂಟಾಗಬಾರದು. ನಗರ ವ್ಯಾಪ್ತಿಯಲ್ಲಿ ಧರೆಗುರುಳುವ ಮರಗಳನ್ನು ಅರಣ್ಯ ಇಲಾಖೆ ತಕ್ಷಣವೇ ತೆರವುಗೊಳಿಸಬೇಕು. ಇಲ್ಲಿ ಮೆಸ್ಕಾಂ ಮತ್ತು ಅರಣ್ಯ ಇಲಾಖೆ ನಡುವೆ ಸಮನ್ವಯದ ಕೊರತೆ ಕಾಣುತ್ತಿದ್ದು ಸರಿಪಡಿಸಿಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು.

ತೀವ್ರ ಮಳೆಯಿಂದ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಗಮನಹರಿಸಬೇಕು ಎಂದು ಪ್ರತಿಪಕ್ಷದ ನಾಯಕ ಎಚ್.ಸಿ.ಯೋಗೀಶ್ ಸಲಹೆ ನೀಡಿದರು.

ಕುಂಬಾರಗುಂಡಿ, ಸೀಗೆಹಟ್ಟಿ ಸೇರಿ ಹಳೇ ಶಿವಮೊಗ್ಗ ಭಾಗದಲ್ಲಿ ಕಳೆದ ಬಾರಿ ಆದಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗಿದೆ. ನೆರೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ತಂಡ ಸಜ್ಜಾಗಿದೆ ಎಂದು ತಹಸೀಲ್ದಾರ್ ಎನ್.ಜೆ.ನಾಗರಾಜ್ ಹೇಳಿದರು. ಉಪಮೇಯರ್ ಸುರೇಖಾ ಮುರಳೀಧರ್, ಪ್ರಭಾರ ಆಯುಕ್ತ ಪ್ರಮೋದ್ ಉಪಸ್ಥಿತರಿದ್ದರು.

ನೆರೆ ನಿಯಂತ್ರಣಕ್ಕೆ ತಂಡ ರಚಿಸಿ: ಕಳೆದ ವರ್ಷ ಅವಘಡಗಳ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಲ್ಲಿನ ನ್ಯೂನತೆಗಳು ಪುನರಾವರ್ತನೆ ಆಗದಂತೆ ಗಮನಹರಿಸಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಲಹೆ ಮತ್ತು ಸಹಕಾರ ಪಡೆಯಬೇಕು. ತುರ್ತು ಅಗತ್ಯಗಳಿಗೆ ಬೋಟ್, ತೆಪ್ಪ, ಹರಿಗೋಲು ನಡೆಸುವವರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪರಿಕರ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಆಡಳಿತದ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಪರಿಕರಗಳ ಪಟ್ಟಿ ಮಾಡಲು ಸೂಚನೆ: ಮರ ಕತ್ತರಿಸುವ ಯಂತ್ರ ಸೇರಿ ಅರಣ್ಯ ಇಲಾಖೆಗೆ ನೆರೆ ಎದುರಿಸಲು ಬೇಕಾಗಿರುವ ಪರಿಕರ ಪಟ್ಟಿ ಮಾಡಿಕೊಡಿ ಎಂದು ಮೇಯರ್ ಸುವರ್ಣಾ ಶಂಕರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮರ ಕತ್ತರಿಸುವ ಯಂತ್ರ, ಲಾರಿ ಸೇರಿ ಅಗತ್ಯ ಪರಿಕರಗಳಿಲ್ಲ ಎಂದು ಎಸಿಎಫ್ ರಮೇಶ್ ಸಭೆಗೆ ಮಾಹಿತಿ ನೀಡಿದರು. ಇದರಿಂದ ಸಿಟ್ಟಿಗೆದ್ದ ಚನ್ನಬಸಪ್ಪ ಹಾಗೂ ಯೋಗೀಶ್, ನಿಮ್ಮ ಬಳಿ ಅಗತ್ಯ ವಸ್ತುಗಳ ಸಾಗಣೆಗೆ ವಾಹನಗಳೆಷ್ಟಿವೆ ಎಂದು ಪ್ರಶ್ನಿಸಿದರು. ವಿದ್ಯುತ್ ಲೈನ್, ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದ ಮರ ಕತ್ತರಿಸಿ ಸಾಗಿಸಲು ಕನಿಷ್ಟಪಕ್ಷ ಲಾರಿಯೂ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net