ನೆರವಿನ ನೆಪದಲ್ಲಿ ಜನಜಾತ್ರೆ!

h3-Lockdown Channamma 1
Published on

ಹುಬ್ಬಳ್ಳಿ: ಕರೊನಾ ಎರಡನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿ ಜನರಲ್ಲಿ ತಲ್ಲಣ ಮೂಡಿಸಿದೆ. ಮತ್ತಷ್ಟು ಸೋಂಕು ಹರಡದಿರಲಿ ಎಂದು ಲಾಕ್​ಡೌನ್ ಮಾಡಲಾಗಿದೆ. ಜನ ಗುಂಪುಗೂಡಬಾರದು ಎಂದು ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಬಡವರಿಗೆ ನೆರವಾಗುವ ನೆಪದಲ್ಲಿ ಜಿಲ್ಲೆಯ ಹಲವೆಡೆ ರಾಜಕಾರಣಿಗಳು, ಪುಢಾರಿಗಳು ಬೇಕಾಬಿಟ್ಟಿ ಓಡಾಡುತ್ತಿರುವುದು ಕಂಡುಬರುತ್ತಿದೆ.
ಕರೊನಾ ಸೋಂಕು ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್​ಡೌನ್ ಅಣಕಿಸುವ ರೀತಿಯಲ್ಲಿ ಎಲ್ಲೆಂದರಲ್ಲಿ ನಿಯಮಾವಳಿ ಮೀರಿ ಜನರು ಸಂಚರಿಸುತ್ತಿದ್ದಾರೆ. ಕರೊನಾ ಹಿಮ್ಮೆಟ್ಟಿಸಲು ಜನ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು ಎಂಬ ಮಾತಿಗೆ ಅರ್ಥವೇ ಇಲ್ಲದಂತಾಗಿದೆ.
ನಿತ್ಯ ಒಂದಿಲ್ಲೊಂದು ಸಂಘಟನೆಯವರು, ರಾಜಕೀಯ ಪಕ್ಷದವರು ಒಂದಿಷ್ಟು ಆಹಾರ ಧಾನ್ಯದ ಕಿಟ್ ಹಿಡಿದುಕೊಂಡು ಗುಡಿಸಲು, ಬೀದಿಬದಿ ಇಲ್ಲವೆ, ಮನೆ ಮನೆಗೆ ಹೋಗಿ ವಿತರಣೆ ಮಾಡುತ್ತಿದ್ದಾರೆ.
ಹುಬ್ಬಳ್ಳಿ- ಧಾರವಾಡದಲ್ಲಿ ಆಹಾರ ಕಿಟ್ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕಾಗಿ ನಗರದಲ್ಲಿ ವಾಹನ ಸಂಚಾರವೂ ಅಧಿಕವಾಗುತ್ತಿದೆ. ಕೆಲವೆಡೆ ನೆರವು ನೀಡುವ ನೆಪದಲ್ಲಿ ಜನಜಾತ್ರೆ ಸೇರುತ್ತಿರುವುದರಿಂದ ಲಾಕ್​ಡೌನ್ ಅರ್ಥ ಕಳೆದುಕೊಳ್ಳುತ್ತಿದೆ. ಕಿಟ್ ವಿತರಿಸುವಾಗ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಜಮಾ ಆಗುತ್ತಾರೆ. ಪರಸ್ಪರ ಅಂತರ ಮರೆಯಾಗುತ್ತಿದೆ. ಬಹಳಷ್ಟು ಕಡೆ ಮಾಸ್ಕ್ ಇಲ್ಲದೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ.
ಬಡವರಿಗೆ, ಅಗತ್ಯ ಉಳ್ಳವರಿಗೆ ನೆರವಾಗುವುದಕ್ಕೆ ಯಾರೂ ಬೇಡ ಎನ್ನುವುದಿಲ್ಲ. ಕೋವಿಡ್- 19 ಸೋಂಕು ಹರಡದಿರುವಂತೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಕಿಟ್ ವಿತರಣೆಗೆ ಕೆಲವು ನಿಯಮಾವಳಿಗಳನ್ನು ರೂಪಿಸಿದೆ. ಆದರೆ, ಇವುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ.
ಏನಿದೆ ನಿಯಮದಲ್ಲಿ?: ಸಾರ್ವಜನಿಕರಿಗೆ, ಬಡವರಿಗೆ ಯಾರೇ ಆಗಲಿ ನೇರವಾಗಿ ಕಿಟ್ ಅಥವಾ ಆಹಾರ ವಿತರಣೆ ಮಾಡಬಾರದು. ಏನೇ ದೇಣಿಗೆ ಕೊಡುವುದಿದ್ದರೂ ಅದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ನೇತೃತ್ವದ ತಂಡಕ್ಕೆ ನೀಡಬೇಕು. ದಾನಿಗಳು ಸೂಚಿಸಿದ ಫಲಾನುಭವಿಗಳಿಗೆ ಇಲಾಖೆಯೇ ತಲುಪಿಸಬೇಕು.
ಆದರೆ, ಜಿಲ್ಲಾಡಳಿತದ ಸೂಚನೆ ಪಾಲಿಸುವವರು ತೀರಾ ಕಡಿಮೆ. ಈವರೆಗೆ ಇಬ್ಬರು ಮಾತ್ರ ಆಹಾರ ಇಲಾಖೆ ಅಧಿಕಾರಿಗಳಿಗೆ ಸಂರ್ಪಸಿದ್ದಾರೆ. ಸಿದ್ಧಾರೂಢಸ್ವಾಮಿ ಮಠ ಟ್ರಸ್ಟ್ ಹಾಗೂ ರೋಟರಿ ಕ್ಲಬ್​ನವರು ಕಿಟ್ ಹಾಗೂ ಆಹಾರ ವಿತರಣೆಗೆಂದು ಇಲಾಖೆಗೆ ನೀಡಿದ್ದರು. ಬೇರೆ ಯಾರೂ ತಮ್ಮನ್ನು ಸಂರ್ಪಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.
ಅಗತ್ಯ ಇರುವವರಿಗೆ ಕೊಡಲಿ: ಲಾಕ್​ಡೌನ್​ನಿಂದಾಗಿ ಬಹಳಷ್ಟು ಬಡವರಿಗೆ ತೊಂದರೆಯಾಗಿದೆ. ಒಂದು ಹೊತ್ತಿನ ಊಟ ಮಾಡುವುದಕ್ಕೂ ಆಗದ ಸ್ಥಿತಿ ಕೆಲವೆಡೆ ಇದೆ ಎಂಬುದು ನಿಜ. ಇಂಥವರಿಗೆ ಉಳ್ಳವರು ಆಹಾರ ಪೂರೈಸಿದರೆ ತಪ್ಪಿಲ್ಲ. ಆದರೆ, ಯಾರೇ ಆಗಲಿ ಕರೊನಾ ಸೋಂಕು ಹರಡುವುದನ್ನು ಗಮನದಲ್ಲಿಟ್ಟುಕೊಂಡು ನೆರವಿಗೆ ಧಾವಿಸಬೇಕು. ಅಗತ್ಯ ಇರುವವರಿಗೆ ಆಹಾರ, ಕಿಟ್ ನೀಡುವುದು ಮಾನವೀಯ ಸಮಾಜದ ಕರ್ತವ್ಯ ಕೂಡ ಹೌದು. ಆದರೆ, ಅದು ನಿಯಮಾವಳಿಗಳ ಅಡಿಯಲ್ಲಿ ಆಗಲಿ ಎಂಬುದು ಪ್ರಜ್ಞಾವಂತ ನಾಗರಿಕರ ನಿರೀಕ್ಷೆಯಾಗಿದೆ.
ಪ್ರತಿಭಟನೆ ನಡೆಸಿದರೂ ಜಿಲ್ಲಾಡಳಿತ ಜಾಣ ಕುರುಡು: ಕರೊನಾ ವ್ಯಾಪಕವಾಗಿರುವ ಸಂದರ್ಭದಲ್ಲಿ ಪ್ರತಿಭಟನೆಯನ್ನೂ ಮಾಡುವ ಹಾಗಿಲ್ಲ. ಆದರೆ, ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪಕ್ಷವೊಂದರ ಕಾರ್ಯಕರ್ತರು ರಾಜಕೀಯ ವಿಷಯ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ನಿಯಮ ಉಲ್ಲಂಘಿಸಿ ಪ್ರತಿಭಟನೆ ಜರುಗಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.
ದಂಡು- ದಂಡ: ಜಿಲ್ಲೆಗೆ ವಿವಿಧ ಸಚಿವರು, ವಿರೋಧ ಪಕ್ಷದ ನಾಯಕರು ಬಂದು ಹೋಗಿದ್ದಾರೆ. ಜಿಲ್ಲೆಯವರಾದ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಅವರು ಕೂಡ ನಗರದಲ್ಲಿ ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ. ಆಗೆಲ್ಲ ಅವರ ಹಿಂದೆ ದಂಡು ಸೇರುತ್ತದೆ. ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ. ಅಲ್ಲಿಯೂ ನಿಯಮಾವಳಿ ಪಾಲನೆ ಬಹುತೇಕ ಸಂದರ್ಭದಲ್ಲಿ ಕಂಡು ಬರುವುದಿಲ್ಲ. ಈಚೆಗೆ ನಗರಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ ಅವರ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಪಾಲನೆಯಾಗಿಲ್ಲ ಎಂದು ಮಹಾನಗರ ಪಾಲಿಕೆ ದಂಡ ಕೂಡ ಹಾಕಿದೆ.

ಜಿಲ್ಲಾಧಿಕಾರಿ ಸೂಚನೆಯಂತೆ ದಾನಿಗಳು ಆಹಾರ ಇಲಾಖೆಗೆ ಕಿಟ್​ಗಳನ್ನು ನೀಡಬೇಕು. ಹೀಗೆ ಸ್ವೀಕರಿಸಿದ ನೆರವನ್ನು ಆಹಾರ ಇಲಾಖೆ ಅಧಿಕಾರಿಗಳು ದಾನಿಗಳು ಸೂಚಿಸಿದ ಫಲಾನುಭವಿಗಳಿಗೆ ವಿತರಣೆ ಮಾಡುತ್ತಾರೆ. ನೆರವು ನೀಡುವವರು ನೇರವಾಗಿ ಜನರ ಬಳಿ ಹೋಗಬಾರದು ಎಂಬ ನಿಯಮವಿದೆ. | ಡಾ. ಸುರೇಶ ಇಟ್ನಾಳ ಮಹಾನಗರ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net