ನೆರಳು ನೀಡುತ್ತಿದ್ದ ಮರಕ್ಕೆ ಕೊಡಲಿ

h22-Tree 4
Published on

ಹುಬ್ಬಳ್ಳಿ: ಜೂನ್ ತಿಂಗಳಲ್ಲಿ ವಿಶ್ವ ಪರಿಸರ ದಿನಾಚರಣೆ, ಮುಂಗಾರು ಮಳೆಯ ಅನುಕೂಲಕರ ವಾತಾವರಣ ಇತ್ಯಾದಿ ಕಾರಣದಿಂದ ಎಲ್ಲ ಕಡೆ ವನಮಹೋತ್ಸವ ಆಚರಿಸಲಾಗುತ್ತದೆ. ಸಸಿ ನೆಟ್ಟು ಪೋಷಿಸುವ ಭಾಷಣ, ಘೊಷಣೆ ಸಾಮಾನ್ಯ. ಆದರೆ, ಇಲ್ಲಿಯ ವಿದ್ಯಾನಗರದಲ್ಲಿ, ಬೇಸಿಗೆಯಲ್ಲಿ ತಂಪಾದ ನೆರಳು ನೀಡಿದ ಹಸಿ ಮರವನ್ನು ಬಲವಾದ ಕಾರಣವೂ ಇಲ್ಲದೆ ಕಡಿದು ಉರುಳಿಸಿ, ಅಕ್ಷರಶಃ ಪರಿಸರ ನಾಶ ಮಾಡಲಾಗಿದೆ.

ವಿದ್ಯಾನಗರ ವಿಸ್ತರಣೆ ಪ್ರದೇಶವಾದ ಕಾಳಿದಾಸ ನಗರದಲ್ಲಿ, ರಸ್ತೆ ಪಕ್ಕದಲ್ಲಿ ನೆಟ್ಟು ಬೆಳೆಸಲಾದ 4 ಮರಗಳನ್ನು ಶನಿವಾರ- ಭಾನುವಾರ ಕಡಿಯಲಾಗಿದೆ. ಸ್ಥಳೀಯರೊಬ್ಬರು ತನಗೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ಯಾರೋ ಗುತ್ತಿಗೆದಾರನಿಗೆ ವಹಿಸಿಕೊಟ್ಟು ಕಡಿಸಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಕೆಲ ಪರಿಸರಾಸಕ್ತರು ವಿಚಾರಿಸಿದರೆ, ಮರ ಕಡಿಯಲು ಪರವಾನಗಿ ಪಡೆದಿರುವುದಾಗಿ ಸ್ಥಳೀಯ ವ್ಯಕ್ತಿ ತಿಳಿಸಿದನು. ಕೇಳಿದವರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಪಾಲಿಕೆ ಅಧಿಕಾರಿಗಳನ್ನು ಸಂರ್ಪಸಿ ವಿಚಾರಿಸಿದರು. ತಾವು ಯಾರಿಗೂ ಪರವಾನಗಿ ಕೊಟ್ಟಿಲ್ಲ, ಮರ ಕಡಿದಿದ್ದಾರೆಯೆ ಅಥವಾ ಟೊಂಗೆ ಕಡಿದಿದ್ದಾರೆಯೆ? ಎಂದು ವಿಚಾರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಜತೆಗೆ, ಅರಣ್ಯ ಇಲಾಖೆ ಪರವಾನಗಿ ಕೊಟ್ಟಿದೆಯೆ ಎಂದು ಗೊತ್ತಾಗಿಲ್ಲ ಎಂದರಂತೆ.

ಅರಣ್ಯ ಇಲಾಖೆಯಲ್ಲಿ ವಿಚಾರಿಸಿದಾಗಲೂ ಪರವಾನಗಿ ನೀಡಲಾಗಿಲ್ಲ ಎಂಬ ಉತ್ತರ ದೊರೆತಿದೆ. ವಿಜಯವಾಣಿಗೆ ಮಾಹಿತಿ ನೀಡಿದ ಪರಿಸರಾಸಕ್ತರು, ಅಪಾಯಕಾರಿಯೂ ಅಲ್ಲದ ಹಸಿ ಮರಗಳನ್ನು ಹೀಗೆ ಕಡಿಯುತ್ತ ಹೋದರೆ, ಹುಬ್ಬಳ್ಳಿ ನಗರ ಬಟಾಬಯಲಾಗಲು ಹೆಚ್ಚು ದಿನ ಬೇಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯಾನಗರ ವಿಸ್ತರಣೆ ಪ್ರದೇಶಗಳನ್ನು ಒಳಗೊಂಡ ಬೀಟ್​ನ ಫಾರೆಸ್ಟರ್ ರಮೇಶ ಅವರನ್ನು ಪತ್ರಿಕೆ ಸಂರ್ಪಸಿದಾಗ, ಕಾಳಿದಾಸ ನಗರದಲ್ಲಿ ಕೆಲವು ಮರದ ಟೊಂಗೆ ಕಡಿಯಲು ಪರವಾನಗಿ ಕೇಳಿ ಅರ್ಜಿ ಬಂದಿರುವುದು ನಿಜ. ಆದರೆ, ಇಲಾಖೆಯಿಂದ ಇನ್ನೂ ಪರವಾನಗಿ ನೀಡಿಲ್ಲ ಎಂದರು. ಯಾವ ಮರ ಕಡಿದಿದ್ದಾರೆ ಎಂದು ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿಯೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net