

ವಿಜಯವಾಣಿ ಸುದ್ದಿಜಾಲ ಆನೇಕಲ್ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶ ಭೋಲಾ ಪಂಡಿತ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಎ.ಎಸ್.ಸಲ್ಮಾ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಆರ್.ರಮೇಶ್ ಮಾತನಾಡಿ, ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅವಶ್ಯಕತೆಯಿರುತ್ತದೆ. ನೆಮ್ಮದಿಯ ಜೀವನ ನಡೆಸಲು ಕಾನೂನಿನ ಅವಶ್ಯಕತೆಯಿದೆ. ಹಾಗಾಗಿ ವಿದ್ಯಾರ್ಥಿಗಳು ಕಾನೂನಿನ ಮತ್ತು ಸಂವಿಧಾನದ ಜ್ಞಾನ ಬೆಳೆಸಿಕೊಳ್ಳಬೇಕು. ಪ್ರತಿನಿತ್ಯದ ಸುಗಮ ಜೀವನ ನಡೆಸಲು ಕಾನೂನು ತಿಳಿದುಕೊಳ್ಳಬೇಕು. ಇದರಿಂದಾಗಿ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಭಾರತ ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಸಾರ್ವಜನಿಕರು ಹಕ್ಕುಗಳನ್ನು ಕೇಳುವುದರ ಜೊತೆಗೆ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು.
ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಂಡು ಕಾನೂನು ಪಾಲನೆ ಮಾಡಬೇಕು. ಪರವಾನಗಿ ಇಲ್ಲದೇ ಬೈಕ್ ಓಡಿಸುವುದು ಸೇರಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ವಿದ್ಯಾರ್ಥಿ ಹಂತದಲ್ಲಿಯೇ ಕಾನೂನು ತಿಳಿದುಕೊಳ್ಳುವುದು ಮುಖ್ಯ. ಸಂಜೀವ್ ಮಹಾಜನ್ ಚಂದಾಪುರ ಸೂರ್ಯಸಿಟಿ ಸರ್ಕಲ್ ಇನ್‌ಸ್ಪೆಕ್ಟರ್