

ಇಂಡಿ: ಪ್ರತಿಯೊಬ್ಬ ತಾಯಂದಿರು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ಕಲಿಸಬೇಕು. ನಾವು ಧರ್ಮವನ್ನು ರಕ್ಷಣೆ ಮಾಡಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ತಾಲೂಕಿನ ಗುಂದವಾನ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟಡ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ, ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಆರ್ಶಿವಚನ ನೀಡಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ನಾವೆಲ್ಲರೂ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವ ಜೊತೆಗೆ ಒತ್ತಡ ಜೀವನದಿಂದ ದೂರವಿರಲು ಸಹಾಯಕವಾಗುತ್ತದೆ ಎಂದರು.
ಬೆಳಗ್ಗೆ 4 ಗಂಟೆಯಿಂದ ಹೋಮ-ಹವನ ಜರುಗಿತು. ಸಕಲ ಸಂಗೀತ ವಾದ್ಯಗಳೊಂದಿಗೆ ಶ್ರೀಶೈಲ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ಯುವಕರಿಂದ ಡೊಳ್ಳು ಕುಣಿತ, ಗೊಂಬೆ ಮೆರವಣಿಗೆ, ಸುಮಂಗಲೆಯರಿಂದ 401 ಕುಂಭಮೇಳ, ಆರತಿ, ಮಲ್ಲಿಕಾರ್ಜುನ ಪಲ್ಲಕ್ಕಿ ಮತ್ತು ಬೀರಲಿಂಗೇಶ್ವರ ಪಲ್ಲಕ್ಕಿ ಮೆರವಣಿಗೆ, ಶ್ರೀಗಳ ಸನ್ನಿಧಿಯಲ್ಲಿ ಧರ್ಮಸಭೆ, ಎರಡು ಜೋಡಿ ಸಾಮೂಹಿಕ ವಿವಾಹ ಜರುಗಿತು.
ತದನಂತರ ಬಂದ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಶಿರಶ್ಯಾಡದ ಸಂಸ್ಥಾನ ಹಿರೇಮಠ ಅಭಿನವ ಮುರುಘೆಂದ್ರ ಶಿವಾಚಾರ್ಯರು, ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ಡೋಣೂರದ ಸಿದ್ಧಲಿಂಗ ಶಿವಾಚಾರ್ಯರು, ಮಡಿವಾಳಯ್ಯ ಶಾಸಿಗಳು, ಕಾಸುಗೌಡ ಬಿರಾದಾರ, ಎಂ.ಆರ್. ಪಾಟೀಲ, ಶ್ರೀಮಂತ ಕಾಪಸೆ, ರಾಗವೇಂದ್ರ ಕಾಪಸೆ, ಸುರೇಶ ಬಿರಾದಾರ ಇದ್ದರು.