

ಆಳಂದ: ಸಿದ್ಧಲಿಂಗ ಶ್ರೀ, ಯಲ್ಲಾಲಿಂಗ ಶ್ರೀ ಹಾಗೂ ಗುರು ಶ್ರೀ ಸಿದ್ಧರಾಮರನ್ನು ಯಾರು ನಿತ್ಯ ನೆನೆಯುತ್ತಾರೋ ಅವರಿಗೆ ಕಷ್ಟಗಳು ಬರುವುದಿಲ್ಲ. ಸುಖ, ಸಂತೋಷ, ನೆಮ್ಮದಿ ಬುದುಕಿಗೆ ಗುರುಗಳ ದರ್ಶನ ಬೇಕು ಎಂದು ಜಿಡಗಾ, ಮುಗಳಖೋಡ, ಕೋಟನೂರ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಜಿಡಗಾ ನವಕಲ್ಯಾಣ ಮಠದಲ್ಲಿ ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳ 16ನೇ ಪುಣ್ಯ ಸ್ಮರಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಸೇರಿ ವಿವಿಧೆಡೆ ಸುಮಾರು 365 ಮಠಗಳು ಸ್ಥಾಪಿಸಿ ಭಕ್ತರಿಗೆ ಧಾರ್ಮಿಕತೆ, ಅನ್ನ- ಜ್ಞಾನ ದಾಸೋಹ ನೀಡಲಾಗುತ್ತಿದೆ. ಮುಗಳಖೋಡ, ಜಿಡಗಾ, ಕೋಟನೂರ ಮಠಗಳ ಅಭಿವೃದ್ಧಿಗೆ ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳು ಶ್ರಮಿಸಿದ್ದಾರೆ. ಶ್ರೀಗಳ ಪವಾಡ, ಲೀಲೆಗಳು ಭಕ್ತರು ಹತ್ತಿರದಿಂದ ಕಂಡಿದ್ದಾರೆ. ಅವರ ಆದರ್ಶಗಳು ನಮಗೆ ಪ್ರೇರಣೆಯಾಗಿವೆ ಎಂದರು.
ಬೆಂಗಳೂರಿನ ಬ್ರಹ್ಮಾಂಡ ಗುರೂಜಿ ಸಮ್ಮುಖ ವಹಿಸಿ ಮಾತನಾಡಿ, ಪುಣ್ಯ ಪುರುಷರ ದರ್ಶನದಿಂದ ಶನಿ ಕಾಟ ತಪ್ಪುತ್ತದೆ. ಹೀಗಾಗಿ ಭಾರತದಲ್ಲಿ ದೇವಸ್ಥಾನಗಳ ಸಂಖ್ಯೆ ಹೆಚ್ಚಿದೆ. ನಮ್ಮಲ್ಲಿ ನಡೆಯುವಷ್ಟು ಪೂಜೆ- ಪುನಸ್ಕಾರ ಇನ್ಯಾವ ದೇಶದಲ್ಲೂ ನಡೆಯುವುದಿಲ್ಲ. ಆದ್ದರಿಂದಲೇ ಭಾರತವನ್ನು ಧಾರ್ಮಿಕತೆಯ ತವರೂರ ಎಂತ ಕರೆಯುತ್ತಾರೆ ಎಂದರು.
ಬೆಳಗಲಿಯ ಶ್ರೀ ಸಿದ್ಧರಾಮ ಶಿವಯೋಗಿ, ಮಸೂಟಿಯ ಶಿವಲಿಂಗ ಶಾಸ್ತ್ರಿಗಳು ಜಿಡಗಾ ಮಠದ ಪರಂಪರೆ ಮತ್ತು ಸಿದ್ಧರಾಮೇಶ್ವರ ಜೀವನ ಸಾಧನೆ ಕುರಿತು ಮಾತನಾಡಿದರು.ಮುಗಳನಗಾಂವ್ದ ಶ್ರೀ ಜೇಮ್ಸಿಂಗ್ ಮಹಾರಾಜ, ಘಟಪ್ರಭಾದ ಶ್ರೀ ಸಂಗಮ್ಮ ತಾಯಿ, ಧುತ್ತರಗಾಂವ್ದ ಶ್ರೀ ಸಿದ್ಧಮಾಂಬೆ ತಾಯಿ, ಕೋಳಿಗುಡ್ಡದ ಶ್ರೀ ಕಾಪ್ಸೆ ಮಹಾರಾಜ, ನದಿ ಇಂಗಳೇಶ್ವರದ ಶ್ರೀ ಮಲ್ಲಿಕಾರ್ಜುನ ಶಾಸ್ತ್ರಿ, ಶ್ರೀ ಬಸವಣ್ಣಪ್ಪ ದೇವರು, ಶ್ರೀ ರೇಣುಕಾ ಯಲ್ಲಮ್ಮ ತಾಯಿ, ಶ್ರೀ ಪರಮಾನಂದ ಸ್ವಾಮೀಜಿ, ಪ್ರಮುಖರಾದ ಮುರಲೀಧರರಾವ ಎಕಲಾರ, ರಾಜಶೇಖರ ಪಾಟೀಲ್, ಗಿರೀಶ ಪಾಟೀಲ್, ಮಲ್ಲಯ್ಯ ಸ್ವಾಮಿ, ಅಣ್ಣಪ್ಪಗೌಡ ಪಾಟೀಲ್, ದೇವರಾಯ ಜವಳಿ, ಪ್ರಸನ್ನರಾಧ್ಯ, ಅನೀಲಕುಮಾರ ದಳವಾಯಿ, ಸಚಿನ್ ಗಣಾಚಾರಿ, ರವಿ ಮಂಠಾಳೆ, ಚನ್ನವೀರ ಕಾಳಕಿಂಗೆ ಇದ್ದರು.
ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳು ಮಹಾನ್ ಪವಾಡ ಪುರುಷರಾಗಿದ್ದು, ಮಠಕ್ಕೆ ಬರುವ ಅಸಂಖ್ಯಾತ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾರೆ. ಇಂದು ಅವರು ಪ್ರತಿಯೊಬ್ಬರಲ್ಲಿ ಅಜರಾಮರವಾಗಿದ್ದಾರೆ. ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ, ಪೀಠಾಧಿಪತಿ, ಜಿಡಗಾ, ಮುಗಳಕೋಡ, ಕೋಟನೂರ
ಲಕ್ಷಾಂತರ ಭಕ್ತರನ್ನು ಹೊಂದಿದ್ದ ಗುರು ಶ್ರೀ ಸಿದ್ಧರಾಮೇಶ್ವರರು ಕಾಮಧೇನು ಕಲ್ಪವೃಕ್ಷದಂತೆ ಸಹಸ್ರ ಭಕ್ತರನ್ನು ಉದ್ಧರಿಸಿದ್ದಾರೆ. ಇವರ ದಾರಿಯಲ್ಲಿಯೇ ಇಂದಿನ ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮಿಗಳು ಸಾಗುತ್ತಿದ್ದಾರೆ. ಶ್ರೀ ಮಠದ ಅಭಿವೃದ್ಧಿ ಜತೆಗೆ, ಭಕ್ತರ ಕಷ್ಟಗಳನ್ನು ದೂರ ಮಾಡುತ್ತಿದ್ದಾರೆ.
| ಬ್ರಹ್ಮಾಂಡ ಗುರೂಜಿ, ಬೆಂಗಳೂರ