ನೆಮ್ಮದಿ ಬದುಕಿಗೆ ಆರೋಗ್ಯವೇ ಮೂಲಾಧಾರ

28BK3
ಬಸವಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಡಾ.ಶಿವರಾಜ ಮಾಲಿಪಾಟೀಲ, ಡಾ.ನಂದಿನಿ ಮಾಲಿಪಾಟೀಲ, ಬಿ.ಕೆ.ಹಿರೇಮಠ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಡಾ.ಮಹದೇವ ಪಾಟೀಲ, ಡಾ.ರಾಜಶೇಖರ ಮದರಿ, ಮಹಾದೇವ ಪೂಜಾರಿ ಇದ್ದರು.
Published on

ಬಸವಕಲ್ಯಾಣ: ನೆಮ್ಮದಿ ಬದುಕಿಗೆ ಆರೋಗ್ಯವೇ ಮೂಲಾಧಾರವಾಗಿದ್ದು, ಉತ್ತಮ ಆರೋಗ್ಯವಿದ್ದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಶಾರೀರಿಕ ಸದೃಢತೆ ಜತೆಗೆ ದೃಢವಾದ ಚಿತ್ತ ಶುದ್ಧಿಯೂ ಹೊಂದಿರಬೇಕಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಹಾರಕೂಡ ಶ್ರೀಮಠದಲ್ಲಿ ಬಸವಕಲ್ಯಾಣದ ಆರೂಷ ಮಕ್ಕಳ ಆಸ್ಪತ್ರೆ ಹಾಗೂ ಇಎನ್‌ಟಿ ಆಸ್ಪತ್ರೆ ವತಿಯಿಂದ ಸೋಮವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಆಂತರಿಕ ಪ್ರಸನ್ನತೆಯನ್ನು ಕಾಪಾಡಿಕೊಂಡು ಎಲ್ಲ ಇಂದ್ರಿಯಗಳು ಹಾಗೂ ಅಂಗಾಂಗಗಳಲ್ಲಿ ಸಾಮ್ಯತೆ ಹೊಂದಿರುವುದು ಮನುಷ್ಯನ ಉತ್ತಮ ಆರೋಗ್ಯಕ್ಕೆ ಅಡಿಪಾಯ ಎಂದರು.

ಚಿಕ್ಕ ಚಿಕ್ಕ ಮಕ್ಕಳಲ್ಲಿಯೂ ಇತ್ತೀಚೆಗೆ ಭೀಕರ ಕಾಯಿಲೆಗಳು ಕಂಡು ಬರುತ್ತಿರುವುದು ಕಳವಳಕಾರಿ ಸಂಗತಿ. ನಮ್ಮ ಆರೋಗ್ಯದ ಶಿಲ್ಪಿಗಳು ನಾವೇ ಆಗಿರುವುದರಿಂದ ದುಷ್ಟ ವ್ಯಸನಗಳಿಗೆ ಬಲಿಯಾಗದೆ ಒಳಗೂ ಹೊರಗೂ ಶುಚಿತ್ವ ರೂಢಿಸಿಕೊಂಡು ಆದರ್ಶ ಬದುಕು ಸಾಗಿಸುವಂತಾಗಬೇಕು ಎಂದು ಹೇಳಿದರು.

ಡಾ.ಶಿವರಾಜ ಮಾಲಿಪಾಟೀಲ ಸ್ವಾಗತಿಸಿ, ಶಿಬಿರದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ. ಕೆ. ಹಿರೇಮಠ, ಪಿಎಲ್​ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮೇಘರಾಜ ನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಡಾ.ನಂದಿನಿ ಮಾಲಿಪಾಟೀಲ, ಡಾ.ಮಹದೇವ ಪಾಟೀಲ, ಡಾ.ರಾಜಶೇಖರ ಮದರಿ, ಗ್ರಾಪಂ ಮಾಜಿ ಅಧ್ಯಕ್ಷ ಮಹಾದೇವ ಪೂಜಾರಿ, ಪಂಡಿತರಾವ ದೇಗಾಂವ, ಸಿದ್ರಾಮ ಹೆಗಡೆ, ಕಾಶಪ್ಪ ದೇಗಾಂವ, ಶಿವರಾಜ ತಾಟೆ ಇದ್ದರು. ವಿಠಲ ಹೂಗಾರ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ, ಕುಮಾರಿ ಭುವನೇಶ್ವರಿ ಮತ್ತು ಅನುಶ್ರೀ ಭಕ್ತಿ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net