ನೆಮ್ಮದಿ ಕೇಂದ್ರದ ಅಧಿಕಾರಿಗಳ ವಿರುದ್ಧ ಆರೋಪ

19M.D.R.1
Published on

ಮದ್ದೂರು: ತಾಲೂಕಿನ ಕೆ. ಹೊನ್ನಲಗೆರೆಯ ನೆಮ್ಮದಿ ಕೇಂದ್ರದಲ್ಲಿ ಸಮರ್ಪಕವಾಗಿ ರೈತರ ಹಾಗೂ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು. ಸರಿಯಾಗಿ ಕರ್ತವ್ಯ ನಿರ್ವಹಿಸದ ನೆಮ್ಮದಿ ಕೇಂದ್ರದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆ.ಹೊನ್ನಲಗೆರೆ ಸ್ವಾಮಿ ಮಾತನಾಡಿ, ನೆಮ್ಮದಿ ಕೇಂದ್ರ ಜನಸಾಮಾನ್ಯರಿಗೆ ಹಾಗೂ ರೈತರಿಗೆ ನೆಮ್ಮದಿ ತರುವ ಬದಲು ಸಮಸ್ಯೆಗಳನ್ನು ಉಂಟುಮಾಡುವ ಮೂಲಕ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಇದನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗಿಲ್ಲ. ನೆಮ್ಮದಿ ಕೇಂದ್ರಕ್ಕೆ ತಾಲೂಕಿನ ಕಸಬಾದ ಹಲವಾರು ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಕಚೇರಿಗೆ ಬಂದರೆ ವಿದ್ಯುತ್, ಸರ್ವರ್ ಸಮಸ್ಯೆಯಿಂದಾಗಿ ರೈತರು ಮತ್ತು ಜನರು ರೋಸಿ ಹೋಗಿದ್ದಾರೆ ಎಂದು ದೂರಿದರು.ಈ ಬಗ್ಗೆ ಇಲ್ಲಿಯ ಅಧಿಕಾರಿಗಳನ್ನು ಕೇಳಲು ಹೋದರೆ ಉಡಾಫೆಯಾಗಿ ವರ್ತನೆ ಮಾಡುತ್ತಾರೆ. ಕೂಡಲೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ತಹಸಿಲ್ದಾರ್ ಚಂದ್ರಿಕಾ ಮಾತನಾಡಿ, ನೆಮ್ಮದಿ ಕೇಂದ್ರದ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net