

ಬೀರೂರು: ಕಲಿಕೆ ಎನ್ನುವುದು ನಿರಂತರದ ಗುಣ ಹೊಂದಿದೆ. ಇದು ವೃತ್ತಿ, ಜ್ಞಾನ ಸೇರಿದಂತೆ ಮಕ್ಕಳಲ್ಲಿ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿದೆ. ಅದೇ ರೀತಿ ಕಲಿಕಾ ಹಬ್ಬವು ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ ಎಂದು ಶಿಕ್ಷಕ ಜಯದೇವಪ್ಪ ತಿಳಿಸಿದರು.
ಮಾರ್ಗದಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಕಲಿಕಾ ಹಬ್ಬದಲ್ಲಿ ಭಾಗವಹಿಸುವ ಮೂಲಕ ಪ್ರತಿಭೆ ಪ್ರದರ್ಶಿಸಬೇಕು ಎಂದರು.
1 ರಿಂದ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಕಾರ್ಯಕ್ರಮದಲ್ಲಿ ಆಯೋಜಿಸುವ 7 ಆಯಾಮಗಳ ಸ್ಪರ್ಧೆಗಳಲ್ಲೂ ಭಾಗವಹಿಸಬೇಕು. ಕಥೆ ಹೇಳುವುದು, ಸ್ಮರಣ ಪರೀಕ್ಷೆ, ಕೈಬರಹ, ಸಂತೋಷದಾಯಕ ಗಣಿತ, ರಸಪ್ರಶ್ನೆ, ಗಟ್ಟಿ ಓದು, ನಿಧಿ ಹುಡುಕಾಟ, ಒಳಾಂಗಣ ಮತ್ತು ಹೊರಾಂಗಣ ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಯನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸಂತೋಷದಾಯಕ ಮತ್ತು ಅನುಭವಯುಕ್ತ ಕಲಿಕೆಗೆ ಒತ್ತು ನೀಡಲಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮೈಲಾರಪ್ಪ ಮಾತನಾಡಿ, ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಕಲಿಕಾ ಹಬ್ಬದಿಂದ ಮಕ್ಕಳಲ್ಲಿ ಶೈಕ್ಷಣಿಕ ಬಲವರ್ಧನೆ, ಸಂಖ್ಯಾಜ್ಞಾನ ಹೆಚ್ಚಿಸುತ್ತದೆ ಎಂದರು.
ಎಸಿಒ ಶಂಕರಪ್ಪ ಮಾತನಾಡಿ, ಎಫ್‌ಎಲ್‌ಎನ್ ಕಲಿಕಾ ಹಬ್ಬ ಮಕ್ಕಳಲ್ಲಿ ನೆನಪಿನ ಶಕ್ತಿ ವೃದ್ಧ್ದಿಸುವ ಪೂರಕ ಚಟುವಟಿಕೆಗಳಿಗೆ ಒತ್ತು ನೀಡುತ್ತದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು ಎಂದರು.
ಕ್ಲಸ್ಟರ್ ಮಟ್ಟದ 13 ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಶಾಲೆಯ ಮುಖ್ಯಶಿಕ್ಷಕ ಎಚ್.ಎನ್.ಹನುಮಂತಪ್ಪ, ಉಮಾ ಮಹೇಶ್ವರ್, ಎನ್.ಮಹೇಶ್, ಕೆಂಪೇಗೌಡ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸೀತಾಲಕ್ಷ್ಮೀ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಅರುಣಾ, ನಾಗರತ್ನಾ, ಸತ್ಯಭಾಮಾ, ಸಿಆರ್‌ಪಿ ವೆಂಕಟೇಶ್, ಎಸ್‌ಡಿಎಂಸಿ ಅಧ್ಯಕ್ಷೆ ಕನ್ಯಕಾ, ಹಳೇ ವಿದ್ಯಾರ್ಥಿಗಳ ಸಂಘದ ಸಂತೋಷ್‌ಕುಮಾರ್, ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದರು.