ನೆಟ್ಟ ಸಸಿಗಳು ಮನೆ ಮಕ್ಕಳಂತೆ

CTD 30 MURUGA SASI (1)---00005
Published on

ಚಿತ್ರದುರ್ಗ: ಸರ್ಕಾರಗಳ ಯಾವುದೇ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಾರ್ವಜನಿಕರ ಸಹಭಾಗಿತ್ವದ ಅಗತ್ಯವಿದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಮುರುಘಾಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಎಸ್‌ಜೆಎಂ ತಾಂತ್ರಿಕ ಮಹಾ ವಿದ್ಯಾಲಯ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಸಸಿ ನೆಡುವ ಸಪ್ತಾಹದ ಉದ್ಘಾಟನಾ ಕಾರ‌್ಯಕ್ರಮದಲ್ಲಿ ಮಾತನಾಡಿ, ಈ ಸಪ್ತಾಹ ಸಾಂಕೇತಿಕವಾಗಬಾರದು. ನಮ್ಮ ನಡವಳಿಕೆ ಯುವಜನರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ತಾಂತ್ರಿಕ ಮಹಾವಿದ್ಯಾಲಯ, ಎಸ್‌ಜೆಎಂ ಪಾಲಿಟೆಕ್ನಿಕ್ ಹಾಗೂ ನರ್ಸಿಂಗ್ ಕಾಲೇಜುಗಳ ಆವರಣದಲ್ಲಿ ಉದ್ಘಾಟನಾ ದಿನದಂದು ಕನಿಷ್ಠ ಒಂದು ಸಾವಿರ ಸಸಿ ನೆಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಚಾರ್ಯರು, ಬೋಧಕರು ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ಸಸಿಗಳನ್ನು ಪೋಷಿಸಲು ಕ್ರಮ ವಹಿಸಬೇಕು ಎಂದರು.
ನಿತ್ಯ ಗಿಡಗಳನ್ನು ಒಮ್ಮೆ ನೋಡಿ ಆಮೇಲೆ ಕಾಲೇಜಿನ ಒಳಗೆ ಹೋಗುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದ ಶ್ರೀಗಳು, ಮನೆ ಮಕ್ಕಳು ಮತ್ತು ಸದಸ್ಯರಂತೆ ಸಸಿಗಳನ್ನು ಸಲುಹುವ ಹೊಣೆಗಾರಿಕೆ ಅಗತ್ಯ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಈಚೆಗೆ ಅಧಿಕ ತಾಪಮಾನ ಆತಂಕವನ್ನು ತಂದೊಡ್ಡಿದೆ. ಇದಕ್ಕೆ ಕಡಿವಾಣ ಹಾಕಲು ಪರಿಸರ ರಕ್ಷಣೆಯೊಂದೇ ಏಕೈಕ ಮಾರ್ಗ ಎಂದರು.
ಪರಿಸರ ಸಾಕಷ್ಟು ಅಧೋಗತಿಯತ್ತ ಸಾಗಿರುವುದರಿಂದಾಗಿ ನಿತ್ಯವೂ ಪರಿಸರ ಜಾಗೃತಿ ಅಭಿಯಾನದ ಕಡೆಗೆ ಮುಖ ಮಾಡಬೇಕಿದೆ. ಅಭಿವೃದ್ಧಿ ಹೆಸರಲ್ಲಿ ಪರಿಸರ ಹಾಳು ಮಾಡುವುದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಹೇಳಿದರು.
ಗುರುಮಠಕಲ್‌ನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀಮಠದ ಈ ಕಾರ‌್ಯ ಮಾರ್ಗದರ್ಶಿ ಮತ್ತು ಅನುಕರಣೀಯವಾಗಿದೆ ಎಂದರು.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ ನೇತೃತ್ವ ವಹಿಸಿದ್ದರು. ಆಡಳಿತ ಮಂಡಳಿ ಲೆಕ್ಕ ಪರಿಶೋಧನಾ ಸಮಿತಿ ಸದಸ್ಯ ಎಸ್.ಎನ್.ಚಂದ್ರಶೇಖರ್, ಪ್ರಾಚಾರ‌್ಯರಾದ ಪಿ.ಬಿ.ಭರತ್, ನಾಗರಾಜ್, ಸವಿತಾ, ಎಸ್.ವಿ.ರವಿಶಂಕರ್, ಬೋರಯ್ಯ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಅಧೀಕ್ಷಕ ಪ್ರಕಾಶ್, ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ಕೆ.ಪ್ರಕಾಶ್ ಗಡಿಯಾರ್ ಮತ್ತಿತರರು ಇದ್ದರು.

*ಕೋಟ್
ಗರಿಷ್ಠ ತಾಪಮಾನ ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಇದರಿಂದ ಋತುಮಾನಗಳಲ್ಲಿ ವ್ಯತ್ಯಾಸಗಳಾಗುತ್ತಿದ್ದು, ನಾವು ವರ್ಷವಿಡೀ ಭೀಕರ ಬರಗಾಲವನ್ನು ಅನುಭವಿಸಬೇಕಾಯಿತು. ನಮ್ಮ ಅತಿಯಾದ ನಿರೀಕ್ಷೆಗಳು, ನಗರೀಕರಣದಿಂದಾಗಿ ಕಾಡು ನಾಶವಾಗುತ್ತಿದೆ. ಸಮೀಕ್ಷೆಯೊಂದರ ಪ್ರಕಾರ ಹೊಲದ ಬದುವಿನಲ್ಲಿದ್ದ 50 ಲಕ್ಷಕ್ಕೂ ಹೆಚ್ಚು ಗಿಡಮರಗಳನ್ನು ಕಡಿದು ಹಾಕಲಾಗಿದೆ.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net