ನೆಟೆ ರೋಗ, ಪರಿಹಾರಕ್ಕೆ ನೀಡಿ ವೇಗ

Mattimud
Published on

ಕಲಬುರಗಿ: ಗ್ರಾಮೀಣ ವಿಧಾನಸಭೆ ಕ್ಷೇತ್ರದ ಕಮಲಾಪುರ, ಶಹಾಬಾದ್, ಆಳಂದ, ಕಲಬುರಗಿ ತಾಲೂಕಿನ ನರೋಣಾ ಸೇರಿ ಎಲ್ಲೆಡೆ ತೊಗರಿ ಬೆಳೆಗೆ ನೆಟೆರೋಗ ಬಾಧಿಸಿದ್ದು, ಕೂಡಲೇ ನೆಟೆ ರೋಗಕ್ಕೆ ಪರಿಹಾರ ನೀಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಗ್ರಾಮೀಣ ವಿಧಾನಸಭೆ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಆಗ್ರಹಿಸಿದರು.

ಕಮಲಾಪುರ ತಾಲೂಕು ಸೇರಿ ಕ್ಷೇತ್ರದ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು, ಪರಿಹಾರ, ರೋಗ ತಡೆಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಿದರು.

ಸರ್ಕಾರವೇ ವಿತರಿಸಿದ ಜಿಆರ್‌ಜಿ ೮೧೧ ಮತ್ತು ೧೫೨ ತಳಿಗಳಿಗೆ ಒಂದು ವಾರದಿಂದ ಶೇ.೩೦ಕ್ಕಿಂತ ಹೆಚ್ಚು ಹೂ ಉದುರುತ್ತಿವೆ. ಕಂದು ಬಣ್ಣದ ಎಲೆ ಚುಕ್ಕೆ ರೋಗ ಬಾಧೆ ಕಾಡುತ್ತಿದೆ. ಜೇಡ ಬಲೆ ಕಟ್ಟುತ್ತಿವೆ. ಕಾಯಿ ಕೋರಕ ಕೀಟದ ಮೊಟ್ಟೆ, ಮರಿ ಹುಳಗಳ ಬಾಧೆಯೂ ಕಂಡು ಬಂದಿದೆ ಎಂದು ಅಧಿಕಾರಿಗೆ ತಿಳಿಸಿದರು.

ಹಾನಿಯಾದ ರೈತರಿಗೆ ಸರ್ಕಾರದಿಂದ ತಕ್ಷಣ ಪರಿಹಾರ ಒದಗಿಸಬೇಕು. ಗ್ರಾಮ ಆಡಳಿತ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು ಪುನಃ ಸಮೀಕ್ಷೆ ಮಾಡಬೇಕು. ಸಮೀಕ್ಷೆಗೆ ಮುನ್ನ ಡಂಗೂರ ಸಾರಬೇಕು. ರೈತರಿಂದ ನಿಖರ ಮಾಹಿತಿ ಪಡೆದು, ವರದಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ತೊಗರಿ ಬೆಳೆಗೆ ನೆಟೆ ರೋಗ ಕಾಣಿಸಿಕೊಂಡಿರುವ ಪ್ರಯುಕ್ತ ಕೃಷಿ ವಿನಿಗಳು ಹಾಗೂ ಸಿಬ್ಬಂದಿಗಳು ಕೂಡಲೇ ಕಲಬುರಗಿ, ಕಮಲಾಪುರ, ಆಳಂದ ಹಾಗೂ ಶಹಾಬಾದ್ ತಾಲೂಕುಗಳಲ್ಲಿ ಬೆಳೆ ಸಮೀಕ್ಷೆಗೆ ರೈತರ ಹೊಲಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಕೃಷಿ ಎಡಿ ಮಲ್ಲಿಕಾರ್ಜುನ, ಮುಖಂಡರಾದ ಗಂಗಪ್ಪಗೌಡ ಬೋಧನ, ಸಿದ್ದಣ್ಣಗೌಡ ಪಾಟೀಲ್ ಧಮ್ಮೂರ, ಶಿವಶಂಕರ ವಾಲಿ, ಶರಣಬಸಪ್ಪ ಪಾಟೀಲ್ ಅಷ್ಟಗಿ, ಬಾಬು ವಾಲಿ, ರೇವಣಸಿದ್ದಪ್ಪ ಮೂಲಗೆ, ಶಿವಾನಂದ ಭೂಶೆಟ್ಟಿ, ಸಂಗಮೇಶ ವಾಲಿ, ಯಲ್ಲಪ್ಪ ಭಂಕೂರ, ಶಿವಕುಮಾರ ಪಾಟೀಲ್ ಜಂಬಗಾ, ಮಲ್ಲಪ್ಪ ಭಂಕೂರ, ಬಸವರಾಜ ಬೋಧನ, ನಾಗು ವಾಡೇದ್, ಶಂಭುಲಿAಗ ಡೊಂಕಿ, ಭೀಮಾಶಂಕರ ಡೊಣ್ಣೂರ ಸೇರಿದಂತೆ ಅಧಿಕಾರಿಗಳು, ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net