

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದ ಶ್ರೀ ಬಸವೇಶ್ವರ ಅಧ್ಯಯನ ಪೀಠವು ದೇಶದ ಪ್ರಥಮ ವಚನ ಸಂಸ್ಕೃತಿಯ ಅಭಿಯಾನ ನಿಮಿತ್ತ ಆ. 24ರಂದು ಸಂಜೆ 4 ಗಂಟೆಗೆ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಸಹಯೋಗದಲ್ಲಿ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ‘ನಿನಲ್ಲದೇ ಮತ್ತಾರೂ ಇಲ್ಲವಯ್ಯ’ ಎಂಬ ಬಸವಣ್ಣನವರ ಆಯ್ದ 44 ವಚನಗಳನ್ನು ಆಧರಿಸಿದ ನೃತ್ಯ ರೂಪಕ ಆಯೋಜಿಸಿದೆ.
ಸಾಣೆಹಳ್ಳಿಯ ತರಳುಬಾಳು ಜಗದ್ಗುರು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಅತಿಥಿಗಳಾಗಿ ಕವಿವಿ ಕುಲಸಚಿವರಾದ ಯಶಪಾಲ ಕ್ಷೀರಸಾಗರ, ಪ್ರೊ.ಸಿ.ಕೃಷ್ಣಮೂರ್ತಿ, ಸಾಹಿತಿ ಡಾ. ವೀರಣ್ಣ ರಾಜೂರ ಆಗಮಿಸುವರು. ಡಾ.ಮಲ್ಲಿಕಾರ್ಜುನ ಪಾಟೀಲ, ಪ್ರೊ. ಎ.ಬಿ.ವೇದಮೂರ್ತಿ, ಕೆ.ಎಂ.ಅಂಗಡಿ ಉಪಸ್ಥಿತರಿರುವರು. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸುವರು.
ಈ ನೃತ್ಯ ರೂಪಕವನ್ನು 30 ಜನ ಯುವತಿಯರ ತಂಡ ಪ್ರಸ್ತುತ ಪಡಿಸಲಿದೆ. ದೇಶದ 16 ರಾಜ್ಯಗಳಲ್ಲಿ ಪ್ರದರ್ಶನ ಕಂಡಿದೆ. ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಕಲ್ಪನೆಯಲ್ಲಿ ರೂಪಕ ಮೂಡಿಬಂದಿದೆ. ಬಸವಾದಿ ಶರಣರ ವಿಚಾರಧಾರೆಗಳನ್ನು ಪ್ರಚುರಪಡಿಸುವುದು ರೂಪಕದ ಮುಖ್ಯ ಉದ್ದೇಶ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನೃತ್ಯರೂಪಕ ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಬಸವೇಶ್ವರ ಪೀಠದ ಸಂಯೋಜಕ ಡಾ.ಸಿ.ಎಂ. ಕುಂದಗೋಳ ತಿಳಿಸಿದ್ದಾರೆ.