

ಮೈಸೂರು: ನೃತ್ಯ ಕಲೆ ಸಮಾಜದೊಂದಿಗೆ ಬೆರೆಯಲು ಅವಶ್ಯವಾಗಿದೆ. ಕೇವಲ ರಿಯಾಲಿಟಿ ಶೋದಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಪಡೆಯುವುದಕ್ಕಲ್ಲ ಎಂದು ಸಾಹಿತಿ ನಾ.ದಿವಾಕರ್ ಹೇಳಿದರು.
ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕಲಾಮಂದಿರದ ಚಿಂತನಾ ಚಾವಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ನೃತ್ಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಸಮುದಾಯಕ್ಕೆ ನೃತ್ಯ ಏಕೆ ಬೇಕು ಎಂಬ ಪ್ರಶ್ನೆಯನ್ನು ಬಹಳಷ್ಟು ಕೇಳುತ್ತಾರೆ. ಸಮಾಜದೊಡನೆ ಬೆರೆಯಲು ಈ ಕಲೆ ಬೇಕು. ಕೇವಲ ರಿಯಾಲಿಟಿ ಶೋಗಳಲ್ಲಿ ಪ್ರದರ್ಶನ ನೀಡಿ ಎಸ್‌ಎಂಎಸ್ ಮೂಲಕ ಪ್ರಶಸ್ತಿ ಪಡೆಯುವುದಕ್ಕೆ ಅಲ್ಲ ಎಂದರು.
ನೃತ್ಯ ಎನ್ನುವುದು ವಿಶೇಷ ಕಲೆ. ಇತಿಹಾಸದಲ್ಲಿ ಎಷ್ಟೇ ಹಿಂದಕ್ಕೆ ಹೋದರೂ ಅದು ಜನಜೀವನದ ಭಾಗವಾಗಿದೆ. ಈಗಲೂ ಜನಜೀವನದೊಂದಿಗೆ ಬೆರೆತು ಹೋಗಿದೆ. ಯಾವುದೇ ದೇಶಕ್ಕೆ ಹೋದರೂ ಯಾವುದೋ ಒಂದು ರೀತಿಯ ನೃತ್ಯ ಹಾಸುಹೊಕ್ಕಾಗಿರುತ್ತದೆ. ಗ್ರಾಮೀಣ ಭಾಗದ ಜಾತ್ರೆಯಲ್ಲಿ ಜಾನಪದ ನೃತ್ಯವೇ ವಿಶೇಷ. ಜನರನ್ನು ಸಂದಿಸುವ ಕಲೆ ಅದು ಎಂದರು.
ಭರತನಾಟ್ಯದ ಮೂಲ ತಿಳಿಯಬೇಕು. 1932ರಲ್ಲಿ ಇದಕ್ಕೆ ಈ ಹೆಸರು ಬಂತು. ಮುಂಚೆ ಸಾದಿರ್ ಆಟ್ಟಂ ಎಂದಿತ್ತು. ಇದು ದೇವಸ್ಥಾನಕ್ಕೆ ಮತ್ತು ಸಮುದಾಯಕ್ಕೆ ಸೀಮಿತವಲ್ಲ ಎಂದು ಜನರ ನಡುವೆ ಸಾರ್ವಜನಿಕಗೊಂಡಿತು. ಆಂಗಿಕ ಕಲೆ ರಂಗಭೂಮಿಗೂ ಬಹಳ ಮುಖ್ಯ ಎಂದರು.
ಆಂಗಿಕ ಕಲೆಯು ನೃತ್ಯದ ಮೂಲಕ ಹಾವ-ಭಾವ-ಭಂಗಿಯೊಂದಿಗೆ ಜನರನ್ನು ರಂಜಿಸುವ ಪ್ರಕಾರ. ನಟಿ ವೈಜಯಂತಿ ಮಾಲಾ ಅವರಂತಹವರು ಸಿನಿಮಾದಲ್ಲಿ ಇದ್ದುಕೊಂಡು ಭರತನಾಟ್ಯವನ್ನು ಜನಪ್ರಿಯಗೊಳಿಸಿದರು. ಎಲ್ಲ ಪ್ರಕಾರದ ನೃತ್ಯ ಜನರನ್ನು ಹತ್ತಿರಕ್ಕೆ ಕರೆತರುವ ಕಲೆ.
ಲಾಸ್ಯ ರಂಜನೆ ಪುಸ್ತಕವನ್ನು ನೃತ್ಯ ಕಲಿಯುವವರು ಓದಲೇಬೇಕು. ನೃತ್ಯ ಕಲೆಗೆ ಬೇಕಾದ ಎಲ್ಲ ಮಾರ್ಗದರ್ಶನ ಸಿಗಲಿದೆ. ಭರತಮುನಿಯ ನಾಟ್ಯಶಾಸ್ತ್ರದಲ್ಲಿ ನಾಟಕದೊಂದಿಗೆ ಎಲ್ಲ ಕಲೆಯ ಬಗ್ಗೆಯೂ ವಿವರಣೆ ಇದೆ. ನಾನು ನಾಟಕ ವಿಮರ್ಶೆ ಮಾಡುತ್ತೇನೆ. ಆದರೆ, ನೃತ್ಯ ವಿಮರ್ಶೆ ಮಾಡಲ್ಲ. ಒಂದೊಂದು ಭಂಗಿಗೂ ಒಂದೊಂದು ಅರ್ಥ ಇರುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಯುವ ಮನಸ್ಸುಗಳನ್ನು ಜಾನಪದ ಸಂಸ್ಕೃತಿಯತ್ತ ಆಕರ್ಷಿಸಬೇಕಿದೆ. ಯಾವುದೇ ಕಲೆ ಇರಲಿ, ಅದಕ್ಕೆ ತಳಹದಿ ಜಾನಪದವೇ. ನೃತ್ಯಕ್ಕೂ ಜಾನಪದವೇ ಬುನಾದಿ. ಜನಸಮುದಾಯದ ಬದುಕಿನ ಸಾಂಸ್ಕೃತಿಕ ತಳಹದಿ ಸಹ ಗಟ್ಟಿಯಾಗಬೇಕು ಎಂದರು
ಕಲೆಯನ್ನು ಕಲಿಯುವಾಗ ಸಹನೆ ಬಹಳ ಮುಖ್ಯ. ಹೊಗಳಿಕೆ ತಲೆಗೇರಬಾರದು. ಕಲಿಯುವುದು ಬಹಳ ಇದೆ ಎಂಬುದು ಹೃದಯದಲ್ಲಿ ಇರಲಿ. ಯುವ ಮನಸ್ಸುಗಳ ಬದುಕಿನ ಹೆಜ್ಜೆ ಸಹ ಗಟ್ಟಿಗೊಳಿಸಬೇಕು ಎಂದು ಹೇಳಿದರು.
ರಂಗಕರ್ಮಿ ನಾಗೇಂದ್ರ, ಟ್ರಸ್ಟ್‌ನ ಕಾರ್ಯದರ್ಶಿ ಕೃಷ್ಣಜನಮನ, ಖಜಾಂಚಿ ಬಿ.ಎಸ್.ದಿನಮಣಿ ಇದ್ದರು.