

ಬಾಗಲಕೋಟೆ: ನೂಲಿಚಂದಯ್ಯನವರು ಕಲ್ಯಾಣ ರಾಜ್ಯದಲ್ಲಿ ಕಾಯದದೊಂದಿಗೆ ಜಂಗಮ ದಾಸೋಹಿಗಳಾಗಿದ್ದರು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಬಕವಿ-ಬನಹಟ್ಟಿ ನಗರದ ಶಿವಶರಣ ನೂಲಿಚಂದಯ್ಯ ಜಯಂತಿ ಉತ್ಸವ ಸಮಿಯ ಆಶ್ರಯದಲ್ಲಿ ರಾಂಪುರ ದಾನೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೂಲಿಚಂದಯ್ಯ ೧೯೮ನೇ ಜಯಂತಿ ಹಾಗೂ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೂಲಿಯ ಚಂದಯ್ಯನವರು ಈಗಿನ ವಿಜಯಪುರ ಜಿಲ್ಲೆಯ ಶಿವಣಗಿಯಲ್ಲಿ ಜನಿಸಿದ ಒಬ್ಬ ಪ್ರಮುಖ ಶರಣರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಸಾರಿದವರು. ಹಗ್ಗ ನೇಯುವ ಕಾಯಕ ಮಾಡುತ್ತಿದ್ದ ಇವರು, ಕಲ್ಯಾಣ ಕ್ರಾಂತಿಯ ನಂತರ ಅಕ್ಕನಾಗಲಾಂಬಿಕೆಯೊAದಿಗೆ ಪ್ರಚಾರಕ್ಕಾಗಿ ತರೀಕೆರೆ ಸಮೀಪದ ಎಣ್ಣೆಹೊಳೆಗೆ ಬಂದು, ನಂತರ ಚಿತ್ರದುರ್ಗ ಜಿಲ್ಲೆಯ ಪದ್ಮಾವತಿಗೆ ತೆರಳಿ ಅಲ್ಲಿಯೇ ಲಿಂಗೈಕ್ಯರಾದರು ಎಂದು ಇತಿಹಾಸದಿಂದ ತಿಳಿದುಕೊಳ್ಳುತ್ತೇವೆ ಎಂದರು.
ಅವರು ಸಮಾಜದಲ್ಲಿ ಸಮಾನತೆ, ಸ್ವಾಭಿಮಾನ ಮತ್ತು ಕಾಯಕ ನಿಷ್ಠೆಯನ್ನು ಸಾರುವ ವಚನಗಳನ್ನು ರಚಿಸಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ, ಶಿಕ್ಷಣದಿಂದ ಸಂಘಟನೆ, ಹೋರಾಟ ಇವು ಸಮಾಜದ ಧ್ಯೇಯವಾಗಬೇಕು. ಭಜಂತ್ರಿ ಸಮಾಜ ಅತ್ಯಂತ ಹಿಂದುಳಿದ ಸಮಾಜ ಅದಕ್ಕೆ ಸೂಕ್ತ ಸ್ತಾನಮಾನ ಕೊಡಲಾಗುವುದು ಎಂದು ಭರವಸೆ ನೀಡಿದರು.
ಸಮಾಜ ಬಾಂಧವರು ಒಗ್ಗಟ್ಟಿನಿಂದ ಇರಬೇಕು. ಸಮುದಾಯ ಭವನ ಹಾಗೂ ಇನ್ನಿತರ ಕಾಯಕ ಮಾಡಲು ಇಲ್ಲಿನ ಸಮಾಜ ಬಾಂದವರು ಎರಡು ಎಕರೆಯಷ್ಟು ಜಮೀನು ಬೇಕು ಎಂಬ ಕೂಗನ್ನು, ಮುಖ್ಯ ಮಂತ್ರಿಗಳೊAದಿಗೆ ಚರ್ಚಿಸಿ ಸಮುದಾಯದ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ, ಮುಧೋಳ ಬೆಳಗಲಿಯ ಸಿದ್ದಾರೂಢ ಆಶ್ರಮದ ಸಿದ್ದರಾಮ ಶಿವಯೋಗಿಗಳು, ಕೊರವಂಜಿ ದೇವಸ್ಥಾನ ರಾಮಣ್ಣ ಮಹಾರಾಜರು, ರನ್ನಬೆಳಗಲಿ ಪುಣ್ಯಕೋಟಿ ಸಿದ್ಧಾಶ್ರಮದ ಡಾ. ರಮೇಶಕುಮಾರ ಶಾಸ್ತಿçಗಳು, ರಬಕವಿ ಗುರುಸದಾಶಿವ ಶಾಖಾಮಠದ ನಿಹಾಲ ಅಪ್ಪಾಜಿ ಸಾನಿಧ್ಯ ವಹಿಸಿದ್ದರು. ಶಾಸಕ ಸಿದ್ದು ಸವದಿ, ನಗರಸಭೆಯ ಅಧ್ಯಕ್ಷೆ ವಿದ್ಯಾ ದಬಾಡಿ, ಸದಸ್ಯರಾದ ಶೋಭಾ ಗಾಡಿವಡ್ಡರ ಇದ್ದರು.