ಕೊಳ್ಳೇಗಾಲ: ಪಟ್ಟಣದ 23ನೇ ವಾರ್ಡ್ ವ್ಯಾಪ್ತಿಯ ನೂರ್ ಮೊಹಲ್ಲಾ ಬಡಾವಣೆಯ 3 ಮಕ್ಕಳು ಸೇರಿದಂತೆ ನಾಲ್ವರು ವಾಂತಿ, ಭೇದಿಯಿಂದ ಅಸ್ವಸ್ಥರಾಗಿ ಶುಕ್ರವಾರ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಡಾವಣೆಯ ಮಹಮ್ಮದ್ ಅಲಿ(15), ಶಾಹುಲ್ ಮಿಸರ್(18), ಫರ್ಮನ್(8), ಉಸ್ಮನ್ ಬೇಗ್ (13) ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಮಹಮ್ಮದ್ ಅಲಿ ಎಂಬ ಬಾಲಕನಿಗೆ ಅತಿಸಾರ ಭೇದಿಯಾಗಿ ಶನಿವಾರ ವ್ಯೆದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ, ಬಡಾವಣೆಯ ನಿವಾಸಿಗಳಿಗೆ ವಾಂತಿ, ಭೇದಿ ಕಾಣಿಕೊಂಡು ಇಲ್ಲಿಯವರೆವಿಗೂ ಸುಮಾರು 10 ಜನರು ಚಿಕಿತ್ಸೆ ಪಡೆದಿದ್ದಾರೆ. ಕೆಲವರು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ.
ಈಗಾಗಲೇ ತಾಲೂಕು ಆರೋಗ್ಯ ಸಿಬ್ಬಂದಿ ಬಡಾವಣೆಯ ಮನೆ ಮನೆಗೂ ಭೇಟಿ ನೀಡಿ ನಿವಾಸಿಗಳ ಆರೋಗ್ಯ ಸ್ಥಿತಿಯನ್ನು ಸರ್ವೇ ನಡೆಸಿದ್ದಾರೆ. ವಾರ್ಡ್‌ನ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಶಾಸಕ ಎ.ಆರ್.ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತರು, ಅಧ್ಯಕ್ಷರು ಹಾಗೂ ಸದಸ್ಯರು ವಾರ್ಡ್ ಭೇಟಿ ಮಾಡಿದ್ದಾರೆ. ತಹಸೀಲ್ದಾರ್ ಬಸವರಾಜು ಅವರು ಖುದ್ದು ಬಡಾವಣೆಯಲ್ಲಿರುವ ತೊಂಬೆ ನಲ್ಲಿಗಳನ್ನು ಏಣಿ ಮೂಲಕ ಏರಿ ವೀಕ್ಷಿಸಿದ್ದಾರೆ.
ಈ ಬಗ್ಗೆ ನಗರಸಭೆ ಸದಸ್ಯೆ ಜಯಮೇರಿ ಮಾತನಾಡಿ, ತಾವು ಪ್ರತಿನಿಧಿಸುವ ವಾರ್ಡ್‌ನಲ್ಲಿ ಕುಡಿಯುವ ನೀರು ಮಲೀನವಾಗಿ ವಾಂತಿ, ಭೇದಿ ಕಾಣಿಸಿಕೊಂಡು ಮಕ್ಕಳು ಸೇರಿದಂತೆ ಕೆಲವರು ಆಸ್ಪತ್ರೆ ಸೇರುತ್ತಿದ್ದಾರೆ. ಇನ್ನು ಕೆಲವರು ಮನೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಇದ್ದಾರೆ. ಅಧಿಕಾರಿಗಳು ಫುಡ್‌ಫಾಯ್ಸನ್ ಎಂದು ಮರೆ ಮಾಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ನಾನೇ ನೀರಿನ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತೇನೆ. ಒಂದು ವೇಳೆ ನೀರಿನ ಸಮಸ್ಯೆ ಕಂಡು ಬಂದರೆ ನಗರಸಭೆ ಹಾಗೂ 24*7 ಕುಡಿಯುವ ನೀರಿನ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುತ್ತೇನೆ. ಈ ಹಿಂದೆಯೇ, ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸು ವಾಗಲೇ ನನ್ನ ಬಾಯಿ ಮುಚ್ಚಿಸಿದ್ದರು. ಇದೀಗ ಸಮಸ್ಯೆ ಆಗಿದೆ. ನಗರಸಭೆ ಅಧಿಕಾರಿಗಳು ವಾರ್ಡ್ ಕಡೆ ಹೆಚ್ಚು ಗಮನಹರಿಸಬೇಕು ಒತ್ತಾಯಿಸಿದರು.