ನೂರು ಮಂದಿಗೆ ಶೀಘ್ರ ಅಧ್ಯಯನ ಪ್ರವಾಸ  -ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾಹಿತಿ

Screenshot_2023-09-16-10-22-44-501_com.android.chrome.jpg
Published on

ದಾವಣಗೆರೆ: ಗ್ರಾಮ ಚೈತನ್ಯ ಜನಸಂಪರ್ಕ ಕಾರ್ಯಾಲಯದ ಮೂಲಕ ಮುಂದಿನ ವರ್ಷದ ಜನವರಿಯಲ್ಲಿ, ಆಯ್ದ 100 ಮಂದಿ ಪ್ರಗತಿಪರ ರೈತರು, ಗ್ರಾ.ಪಂ. ಸದಸ್ಯರು ಹಾಗೂ ಶಿಕ್ಷಕರಿಗೆ ಅಧ್ಯಯನ ಪ್ರವಾಸ ಆಯೋಜಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.

ಮಹಾನಗರ ಪಾಲಿಕೆ ಕಟ್ಟಡದಲ್ಲಿ, ಶುಕ್ರವಾರ ತಮ್ಮ ನೂತನ ಜನಸಂಪರ್ಕ ಕಾರ್ಯಾಲಯದ ಪೂಜಾ ಕಾರ್ಯಕ್ರಮ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾರ್ಯಾಲಯದ ಮೂಲಕ ಸ್ಥಳೀಯ ಸಂಸ್ಥೆಗಳ ಸದಸ್ಯರ ಜವಾಬ್ದಾರಿಗೆ ಚೈತನ್ಯ ತುಂಬಲಾಗುವುದು. ನನ್ನ ವ್ಯಾಪ್ತಿಯಲ್ಲಿನ ಜಗಳೂರು, ಮಾಯಕೊಂಡ, ಹರಿಹರ, ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳ ಗ್ರಾಮ ಪಂಚಾಯ್ತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಗಳ ಸದಸ್ಯರ ಆಶಯಗಳಿಗೆ ಸ್ಪಂದಿಸುವುದಾಗಿ ಹೇಳಿದರು.

ಚಿತ್ರದುರ್ಗದಲ್ಲಿ ಅಂತ್ಯೋದಯ ಕಾರ್ಯಕ್ರಮದಡಿ ಗ್ರಾ.ಪಂ. ಸದಸ್ಯರ ಸಬಲೀಕರಣಕ್ಕೆ 2100 ಸದಸ್ಯರಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಗಿದೆ. ದಾವಣಗೆರೆಯಲ್ಲಿಯೂ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಮೊದಲ ಬಾರಿಗೆ ತಾಲೂಕಿಗೆ ಒಂದರಂತೆ ಗ್ರಾಮ ಪಂಚಾಯಿತಿ ಕಾರ್ಯಾಲಯ ನಿರ್ಮಿಸಲಿದ್ದು, ಇಂಟರ್‌ನೆಟ್ ಸೌಲಭ್ಯ, ಗ್ರಂಥಾಲಯ, ಮಹಿಳಾ ಸದಸ್ಯರಿಗೆ ಪ್ರತೇಕ್ಯ ಕೊಠಡಿ ಕಲ್ಪಿಸಲಾಗುವುದು. ಅಲ್ಲಿಯೇ ಗ್ರಾಮ ಸಭೆಗಳನ್ನು ನಡೆಸುವ ನಿಟ್ಟಿನಲ್ಲಿ ಯೋಜನೆ ಮಾಡಲಾಗುವುದು. ನನ್ನ ಕ್ಷೇತ್ರದ 11 ತಾಲೂಕುಗಳಲ್ಲಿಯೂ ತಲಾ ಒಂದು ಕಾರ್ಯಾಲಯ ನಿರ್ಮಿಸಲು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ದೂಡಾ ಕಾಯಂ ಸದಸ್ಯರು ಆಗಿರುವ ನಾನು, ಹೊಸ ಬಡಾವಣೆ, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಚರ್ಚಿಸಲಾಗುವುದು. ವಿದ್ಯಾರ್ಥಿಗಳ ಕೆರಿಯರ್ ಕುರಿತು ಮಾರ್ಗದರ್ಶನ ನೀಡಲು ವಿವಿಧ ಸಂಸ್ಥೆಗಳೊಂದಿಗೆ ಚರ್ಚಿಸಿದ್ದು, ಬಡವರ ಮಕ್ಕಳಿಗೆ ಶೈಕ್ಷಣಿಕ ಮಾರ್ಗದರ್ಶನ ದೊರಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಯೋಜನೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ, ಪಾಲಿಕೆ ಉಪಮೇಯರ್ ಯಶೋದಾ ಯಗ್ಗಪ್ಪ, ಮಾಜಿ ಉಪಮೇಯರ್ ಗಾಯತ್ರಿ ಬಾಯಿ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಸದಸ್ಯರಾದ ಕೆ.ಪ್ರಸನ್ನ ಕುಮಾರ್, ಎಲ್.ಡಿ. ಗೋಣೆಪ್ಪ, ರೇಣುಕಾ ಶ್ರೀನಿವಾಸ್, ಗೌರಮ್ಮ ಗಿರೀಶ್, ಕೆ.ಎಂ. ವೀರೇಶ್ ಇತರರಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net