ನೂರು ಪೌರ ಕಾರ್ಮಿಕರ ನೇಮಕಕ್ಕೆ ಸರ್ಕಾರದ ಜತೆ ಚರ್ಚೆ

ctd 13 mla kcv nagrasabe-003
Published on

ಚಿತ್ರದುರ್ಗ: ಕಳಪೆ ದೂರು ಹಿನ್ನೆಲೆ ಅಮೃತ್ ಯೋಜನೆ ಕಾಮಗಾರಿಗಳ ತನಿಖೆಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಅವರಿಗೆ ಸೂಚಿಸಿದರು.
ನಗರಸಭೆಯಲ್ಲಿ ಮಂಗಳವಾರ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ಆಗಿರುವ ನೀರು ಪೂರೈಕೆ ಕಾಮಗಾರಿಗಳ ತನಿಖೆಯಾಗಬೇಕು. ಇನ್ನು ಮುಂದೆ ನಗರದ ಅಭಿವೃದ್ಧಿಗೆ ಅಧಿಕಾರಿಗಳು, ಸದಸ್ಯರು ಸಹಕರಿಸಬೇಕು.
ಇತಿಹಾಸ ಪ್ರಸಿದ್ಧ ಚಿತ್ರದುರ್ಗ ನಗರದ ಅಭಿವೃದ್ಧಿ ಆಗದಿರಲು ಕಾರಣ ಏನು ಎಂಬುದರ ಕುರಿತು ಒಂದು ವರ್ಷದ ಹಿಂದೆ ಸಮೀಕ್ಷೆ ಮಾಡಿಸಿದ್ದೇನೆ. ಪ್ರತಿ 5 ವರ್ಷಗಳಿಗೊಮ್ಮೆ ಕುಡಾದಿಂದ ಆಗ ಬೇಕಿದ್ದ ನಗರ ವಿಸ್ತರಣೆ ಆಗದಿರಲು ಕಾರಣಗಳೇನು? ಸಾಕಷ್ಟು ಸರ್ಕಾರಿ ಕಚೇರಿಗಳು ಹಳೆಯದಾಗಿವೆ. ಕನಿಷ್ಠ ನೂರು ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಡಿ ನೇಮಕಕ್ಕೆ ಸರ್ಕಾರದೊಂದಿಗೆ ಚರ್ಚಿಸುತ್ತೇನೆ.
ಶಾಂತಿಸಾಗರದಿಂದ ನಗರಕ್ಕೆ ಕುಡಿವ ನೀರು ಸರಬರಾಜು ಪೈಪ್‌ಲೈನ್ ಒಂದು ದಿನದಲ್ಲಿ ದುರಸ್ಥಿಯಾಗದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಯುಜಿಡಿಯಿಂದ ನಗರ ನಿವಾಸಿಗಳಿಗಿಂತ ಹೆಚ್ಚಿನ ಗ್ರಾಮೀಣರು ತೊಂದರೆ ಅನುಭವಿಸುವಂತಾಗಿದೆ. ನಗರದ ಕೊಳಚೆ ನೀರು ಮಲ್ಲಾಪುರ ಕೆರೆ ಸೇರಿ ಗೋನೂರಿಗೂ ಹೋಗುತ್ತಿದೆ. ನಗರಸಭೆಗೆ ಅಗತ್ಯವಿರುವ 4-5 ಇಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸ ಕೊಳ್ಳ ಬೇಕು. 35 ವಾರ್ಡ್‌ಗಳ ಸದಸ್ಯರನ್ನೂ ಪಕ್ಷ ಬೇಧವಿಲ್ಲದೆ ಸಮಾನವಾಗಿ ಕಾಣಲಾಗುವುದು. ಕೋಟೆ ರಸ್ತೆ ಮೊದಲು ಸರಿಯಾಗಬೇಕು.
ವರದಿ ಕೇಳಿದ್ದೇನೆ
ನಗರದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ರೋಡ್ ಡಿವೈಡರ್‌ಗಳ ತೆರವಿಗೆ ಸಂಬಂಧಿಸಿದ ಇಲಾಖೆಯವರಿಂದ ವರದಿ ಕೇಳಿದ್ದೇನೆ. ಸಿಬ್ಬಂದಿ ಹಾಜರಾತಿ ಸರಿಯಾಗಿರ ಬೇಕು. ಕೊಳವೆಬಾವಿ ಅಗತ್ಯವಿದ್ದರೆ ಪಟ್ಟಿ ಕೊಡಿ. ಖಾತೆ ಬದಲಾವಣೆ,ಇ-ಸ್ವತ್ತಿಗೆ ವಿನಾ ಕಾರಣ ಜನರನ್ನು ಅಲೆದಾಡಿಸ ಬಾರದೆಂದರು.
ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿರುವ ವಾರ್ಡ್‌ಗಳನ್ನು ಹಿಂದಿನ ಶಾಸಕರು ಕಡೆಗಣಿಸಿದ್ದಾರೆ ಎಂದು ದೂರಿದ ಮಂಜುನಾಥ್ ಗೊಪ್ಪೆ ಅವರು, ರೋಡ್ ಡಿವೈಡರ್‌ಗಳ ಮೇಲೆ ಗಿಡ ನೆಡಲು ಮಾಡಿರುವ 2 ಕೋಟಿ ರೂ.ಮೊತ್ತದ ಪಾಸ್ ಮಾಡದಂತೆ ಮನವಿ ಮಾಡಿದರು. ಶಾಸಕರು, ಇದರ ಬಿಲ್ ತಡೆಗೆ ಸೂಚಿಸಿದರು.
ಡಿ.ಮಲ್ಲಿಕಾರ್ಜುನ್ ಮಾತನಾಡಿ ನಗರದ ನೀರಿನ ಸಮಸ್ಯೆ ಬಗೆಹರಿಸುವಂತೆ ಕೋರಿದರು. ನೀರು ಸರಬರಾಜು ಟ್ಯಾಂಕ್‌ಗಳು ಕಳಪೆಯಾಗಿ ದ್ದು,ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರೆ,ಕಾಮಗಾರಿಗಳ ಅಕ್ರಮಗಳ ತನಿಖೆಗೆ ಒತ್ತಾಯಿಸಿದ ನಸ್ರುಲ್ಲಾ ಅವರು,ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಬೇಕು. ರಸ್ತೆ ಡಿವೈಡರ್‌ಗಳನ್ನು ಸರಿಪಡಿಸ ಬೇಕೆಂದರು.
ಎಚ್.ಭಾಸ್ಕರ್,ಕೋಟೆ ರಸ್ತೆ ಹಳೆ ಸೇತುವೆ ಹಾಳಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಜೈಲಾಲುದ್ಧೀನ್,ತಾರಕೇಶ್ವರಿ,ಪಿ.ಕೆ.ಮೀನಾಕ್ಷಿ ಮತ್ತಿತರ ಸದಸ್ಯರು ನಾನಾ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ನಗರಸಭೆ ಅಧಿಕಾರಿಗಳು ಶಾಲಾ ಮೈದಾನವೊಂದನ್ನು ಸರ್ಕಸ್ ಕಂಪನಿಯೊಂದಕ್ಕೆ ಬಾಡಿಗೆ ಕೊಟ್ಟಿದ್ದನ್ನು ರದ್ದುಪಡಿಸಿದ್ದೇನೆ ಎಂದು ಶಾಸಕರು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷೆ ತಿಪ್ಪಮ್ಮ,ಸದಸ್ಯರಾದ ಶ್ವೇತಾವೀರೇಶ್,ವೆಂಕಟೇಶ್,ಪೂಜಾ,ಗೀತಾ,ನಾಗಮ್ಮ,ಕೆ.ಬಿ.ಸುರೇಶ್,ಮಾಜಿ ಸದಸ್ಯರಾದ ಫಕೃದ್ಧೀನ್,ದಾವೂದ್,ರಮೇಶ್,ಮ್ಯಾನೇಜರ್ ಮಂಜುಳಾ,ಲೆಕ್ಕ ಅಧೀಕ್ಷಕ ಮೆಹಬೂಬ್‌ಆಲಿ,ಸಹಾಯಕ ಇಂಜಿನಿಯರ್ ಗಿರೆಡ್ಡಿ,ಪರಿಸರ ಇಂಜಿನಿಯರ್ ಜೆ.ಜಾಫರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net