

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಕಾನೂನು, ಸುವ್ಯವಸ್ಥೆಯ ಹೊಣೆ ಹೊತ್ತಿರುವ ರಾಜ್ಯದ ಪೊಲೀಸ್ ಠಾಣೆಗಳ ಪೈಕಿ 118 ಸೂಕ್ತ ಕಟ್ಟಡಗಳಿಲ್ಲದೇ ಸೊರಗಿವೆ. ಸಮಾಜಕ್ಕೆ ರಕ್ಷಣೆ ನೀಡುವ ಆರಕ್ಷಕರು ಕರ್ತವ್ಯ ನಿರ್ವಹಿಸಲು ಮೂಲ ಸೌಲಭ್ಯದ ಕೊರತೆಯಿದೆ. ಕೆಲವು ಶಿಥಿಲವಾಗಿವೆ, ಇಕ್ಕಟ್ಟಾದ ಸ್ಥಳದಲ್ಲಿವೆ. ಜಾಗದ ಕೊರತೆಯೂ ಇದೆ. ಹಳೆಯ ಕಟ್ಟಡಗಳಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.
ಇದನ್ನು ಮನಗಂಡು, ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್‌ಪಿಎಚ್ ಆ್ಯಂಡ್ ಐಡಿಸಿಎಲ್) ಕೇಂದ್ರದ ನೆರವಿನೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಅಂದಾಜು 300 ಕೋಟಿ ರೂ. ವೆಚ್ಚದಲ್ಲಿ ಆಯ್ದ 100 ಠಾಣೆಗಳಿಗೆ ಹೊಸ ಕಟ್ಟಡ ನಿರ್ಮಿಸಲು ಮುಂದಾಗಿದೆ. ಅವುಗಳಲ್ಲಿ ಮಹಿಳಾ, ಸಿಇಎನ್ ಮತ್ತು ಸಂಚಾರ ಸ್ಟೇಷನ್‌ಗಳೂ ಸೇರಿದ್ದು, ನಿವೇಶನವನ್ನೂ ಗುರುತಿಸಲಾಗಿದೆ.
ಬೆಂಗಳೂರು ಮತ್ತಿತರ ದೊಡ್ಡ ನಗರಗಳು/ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಿಗೆ ಹೆಚ್ಚಿನ ವೆಚ್ಚದಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಠಾಣೆಗಳಿಗೆ ಕೊಂಚ ಕಡಿಮೆ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದ್ದು ಹೈಟೆಕ್ ಸ್ವರೂಪ ಪಡೆಯಲಿವೆಯಂತೆ.
ದಾವಣಗೆರೆ ದಕ್ಷಿಣ ಸಂಚಾರ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪೇಪರ್‌ಟೌನ್, ಸಂಚಾರ, ಚಿತ್ರದುರ್ಗ ಸಿಇಎನ್, ಮಹಿಳಾ, ಹಿರಿಯೂರು ತಾಲೂಕು ಐಮಂಗಲ, ಬಳ್ಳಾರಿ ಜಿಲ್ಲೆಯ ಸಿರಿಗೆರಿ, ಪಿಡಿಹಳ್ಳಿ ಠಾಣೆ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿ, ಬಳ್ಳಾರಿ ಕೌಲ್‌ಬಜಾರ್, ಬನ್ಸಿಪೇಟ್, ಗಾಂಧಿ ನಗರ, ಮಹಿಳಾ ಠಾಣೆ, ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮಾಂತರ, ಸಿಇಎನ್, ಮಹಿಳಾ ಹಾಗೂ ಬೇವೂರು ಠಾಣೆ, ವಿಜಯನಗರ ಜಿಲ್ಲೆ ಹೊಸಪೇಟೆ ಬಡಾವಣೆ ಠಾಣೆ ಹೀಗೆ ಪಟ್ಟಿ ಬೆಳೆಯುತ್ತದೆ.
ಯಾವ ಠಾಣೆಗಳಿಗೆ ಹೊಸ ಕಟ್ಟಡ ಅಗತ್ಯವಿದೆ ಹಾಗೂ ನಿವೇಶನ ಲಭ್ಯತೆಯ ವಿವರವನ್ನು ಅಭಿವೃದ್ಧಿ ನಿಗಮ ಸಂಗ್ರಹಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಜ್ಜಾಗುತ್ತಿದೆ.
...
ಬಾಡಿ ವೋರ್ನ್ ಕ್ಯಾಮರಾಕ್ಕೆ ಅನುದಾನ
ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಾಡಿವೋರ್ನ್ ಕ್ಯಾಮರಾ ಒದಗಿಸಲು ಒಂದು ಕೋಟಿ ರೂ. ಅನುದಾನ ಒದಗಿಸಲು ಕೇಂದ್ರ ಸರ್ಕಾರ ಮುಂದೆ ಬಂದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕೋಟ್
ಬಾಡಿಗೆ ಕಟ್ಟಡದಲ್ಲಿರುವ ಚಿತ್ರದುರ್ಗ ನಗರದ ಸಿಇಎನ್ ಠಾಣೆ, ಬಡಾವಣೆ ಠಾಣೆಯಲ್ಲಿರುವ ಮಹಿಳಾ ಹಾಗೂ ಹಿರಿಯೂರು ತಾಲೂಕು ಐಮಂಗಲ ಠಾಣೆಗಳಿಗೆ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಅಗತ್ಯ ನಿವೇಶನಗಳಿದ್ದು, ಜಾಗದ ಸಮಸ್ಯೆ ಇಲ್ಲ.
ರಂಜಿತ್‌ಕುಮಾರ್ ಬಂಡಾರು, ಎಸ್‌ಪಿ ಚಿತ್ರದುರ್ಗ
-----