ನೂರು ದಿನದೊಳಗೆ ಎತ್ತಿನಹೊಳೆ ಯೋಜನೆ ಕಾರ್ಯಾರಂಭ

22 skpp 1 (2)
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ವಿದ್ಯುತ್ ಸಬ್ ಸ್ಟೇಷನ್‌ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ವೀಕ್ಷಿಸಿದರು. ಪ್ರಜ್ವಲ್ ರೇವಣ್ಣ, ಶಿವಲಿಂಗೇಗೌಡ, ಸಿಮೆಂಟ್ ಮಂಜು ಇತರರು ಇದ್ದರು.
Published on

ಸಕಲೇಶಪುರ: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಇನ್ನೂ ನೂರು ದಿನಗಳ ಕಾಲಮಿತಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ 400 ಕೆವಿ ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿಯನ್ನು ಮಂಗಳವಾರ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ಪೂರ್ಣಗೊಳ್ಳಲು ಕೆಲ ತಾಂತ್ರಿಕ ಅಡಚಣೆಗಳು ಎದುರಾಗಿರುವುದರಿಂದ ಗುತ್ತಿಗೆದಾರರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ಸರ್ಕಾರ ಕಾಮಗಾರಿ ನಡೆಸಲು ಇರುವ ಅಡಚಣೆ ಬಗೆಹರಿಸಲು ಬದ್ಧತೆ ತೋರದ ಪರಿಣಾಮ ಯೋಜನೆಯ ಪ್ರಗತಿಯಲ್ಲಿ ಕುಂಠಿತಗೊಂಡಿದೆ ಎಂದರು.

ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುವಂತೆ ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಕಾಲಮಿತಿ ನಿಗದಿಪಡಿಸಿದ್ದು, ಇನ್ನೂ ನೂರು ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಸದ್ಯ ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಏಳು ಪ್ಯಾಕೇಜ್ ಮೂಲಕ 4115.6 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗಿದ್ದು ಈಗಾಗಲೇ ಶೇ.88 ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಯೋಜನೆಯಲ್ಲಿ ಉದ್ದೇಶಿಸಿರುವ 8 ವಿಯರ್, 9 ಪಂಪ್‌ಹೌಸ್, 8 ವಿದ್ಯುತ್ ಸಬ್‌ಸ್ಟೇಷನ್ ಹಾಗೂ 4 ವಿತರಣ ತೊಟ್ಟಿ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿವೆ. ತಾಲೂಕಿನ 8 ವಿಯರ್‌ಗಳಿಂದ ನಾಗರ ಗ್ರಾಮದ ವಿತರಣ ತೊಟ್ಟಿಗೆ ಸಂಪರ್ಕ ಕಲ್ಪಿಸಲು 126.80 ಕಿ.ಮೀ. ಉದ್ದದ ಕೊಳವೆ ಮಾರ್ಗವಿದ್ದು, 92 ಮೀಟರ್ ಪೈಪ್‌ಲೈನ್ ಕಾಮಗಾರಿ ಬಾಕಿ ಇದ್ದು, ಶೀಘ್ರ ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ. ಅಲ್ಲದೆ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ 219.44 ಮೆ.ವ್ಯಾ. ವಿದ್ಯುತ್ ಪೂರೈಸುವ ಸಬ್‌ಸ್ಟೇಷನ್ ಕಾಮಗಾರಿ ಮುಕ್ತಾಯಗೊಂಡಿದ್ದು, ಟ್ರಯಲ್ ರನ್ ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿದೆ ಎಂದು ತಿಳಿಸಿದರು.

ಯೋಜನೆಯ ಎರಡನೇ ಹಂತವನ್ನು 7 ಪ್ಯಾಕೇಜ್‌ಗಳಾಗಿ ವಿಂಗಡಿಸಿ 18084 ಕೋಟಿ ರೂ.ಗೆ ಟೆಂಡರ್ ನೀಡಲಾಗಿದ್ದು, ಈಗಾಗಲೇ 8636 ಕೋಟಿ ರೂ. ವೆಚ್ಚದ ಕಾಮಗಾರಿ ಮುಕ್ತಾಯಗೊಂಡಿದೆ. ಇದರಿಂದಾಗಿ ಸಕಲೇಶಪುರ ತಾಲೂಕಿನ ಹರವನಹಳ್ಳಿ ಗ್ರಾಮ ಸಮೀಪ ನಿರ್ಮಿಸಿರುವ ವಿತರಣ ತೊಟ್ಟಿ 4ರಿಂದ 261 ಕಿ.ಮೀ. ನೀರು ಹರಿಸಲು ಉದ್ದೇಶಿಸಿದ್ದು, ಈಗಾಗಲೇ 183 ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದೆ. ಯೋಜನೆಗಾಗಿ ಒಟ್ಟು 9023 ಎಕರೆ ಭೂಮಿ ಅವಶ್ಯಕತೆ ಇದ್ದು, 5454 ಎಕರೆ ಜಮೀನು ವಶಕ್ಕೆ ಪಡೆಯಲಾಗಿದ್ದು, ಭೂಸ್ವಾಧೀನಕ್ಕಾಗಿ 1212.80 ಕೋಟಿ ರೂ. ಸೇರಿದಂತೆ ಈ ಯೋಜನೆಗೆ ಇದುವರೆಗೆ 14076.15 ಕೋಟಿ ರೂ. ವೆಚ್ಚಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಂತರ ದೊಡ್ಡನಾಗರ, ಕಪ್ಪಳ್ಳಿ ಗ್ರಾಮಗಳಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಪರಿಶೀಲನೆ ನಡೆಸಿದರು. ಸಂಸದರಾದ ಡಿ.ಕೆ ಸುರೇಶ್, ಪ್ರಜ್ವಲ್ ರೇವಣ್ಣ, ಶಾಸಕರಾದ ಶಿವಲಿಂಗೇಗೌಡ, ಸಿಮೆಂಟ್ ಮಂಜು, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಜಿಲ್ಲಾಧಿಕಾರಿ ಸತ್ಯಭಾಮಾ, ಜಿಪಂ ಸಿಇಒ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net