

ಕಲಬುರಗಿ: ಕೆಲವು ದಿನಗಳಿಂದ ತನ್ನ ರಣಕೇಕೆ ಮುಂದುವರಿಸಿರುವ ಕರೊನಾದಿಂದ ಬಳಲುತ್ತಿದ್ದ ಜಿಲ್ಲೆಯ 1007 ಜನರಲ್ಲಿ ಬುಧವಾರ ಒಂದು ನೂರು ಸೋಂಕಿತರು ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ. ಕರೊನಾದ ನೂರು ದಿನಗಳ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಚೇತರಿಸಿಕೊಂಡಿರುವುದು ಇದೇ ಮೊದಲ ಸಲವಾಗಿದೆ.
ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಪ್ರಕರಣಗಳನ್ನು ಹೊಂದಿದ ಎರಡನೇ ಜಿಲ್ಲೆ ಕಲಬುರಗಿಯಾಗಿದ್ದು 1026 ಪ್ರಕರಣಗಳಿವೆ. ಬುಧವಾರ ಪತ್ತೆಯಾದ 19 ಪ್ರಕರಣಗಳಲ್ಲಿ ಒಂಬತ್ತು ವರ್ಷದ ಬಾಲಕನಿದ್ದು ಈತನ ಟ್ರಾವೆಲ್ಸ್ ಹಿಸ್ಟರಿ ಪತ್ತೆ ಮಾಡಬೇಕಾಗಿದೆ. ಗುಜರಾತದಿಂದ ಬಂದಿರುವ ಏಳು ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಇನ್ನುಳಿದ 17 ಪ್ರಕರಣಗಳು ಮಹಾರಾಷ್ಟ್ರದಿಂದ ಮರಳಿ ಬಂದವರಿಗೆ ಸೇರಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಒಂಬತ್ತು ವರ್ಷದ ಬಾಲಕಿ, ಎರಡು ವರ್ಷದ ಕೂಸು, ನಾಲ್ಕು ವರ್ಷದ ಇಬ್ಬರು ಬಾಲಕರು, ಮೂರು ವರ್ಷದ ಬಾಲಕ, ಎರಡು ವರ್ಷದ ಒಂದು ಹೆಣ್ಣುಮಗುವಿಗೆ ಸೋಂಕು ತಗುಲಿದೆ. 19ರಲ್ಲಿ ಎಂಟು ಮಕ್ಕಳಿಗೆ ಕರೊನಾ ಸೋಂಕು ತಗುಲಿದೆ. ಎಂಟು ಮಹಿಳೆಯರು ಸೇರಿದ್ದಾರೆ. ಇವರನ್ನೆಲ್ಲ ಇಲ್ಲಿಯ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಐಸಿಯುವಿನಲ್ಲಿ ಒಂಬತ್ತು ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಒಟ್ಟು ಸಂಖ್ಯೆ 1026 ಆಗಿದ್ದು, ಇವರಲ್ಲಿ ಹತ್ತು ಜನ ಮೃತಪಟ್ಟಿದ್ದಾರೆ. ಚೇತರಿಸಿಕೊಂಡು ಮನೆಗಳಿಗೆ ತೆರಳಿದವರ ಸಂಖ್ಯೆ 574 ಆಗಿದ್ದು, 442 ಸಕ್ರೀಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.