ನೂರಾರು ಹೆಕ್ಟೇರ್ ಬೆಳೆ ನಾಶ

08 yelandur 03
ಯಳಂದೂರು ತಾಲೂಕಿನಲ್ಲಿ ಕೃಷಿ ಭೂಮಿ ಜಲಾವೃತಗೊಂಡಿರುವುದು.
Published on

ಳಂದೂರು: ತಾಲೂಕಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳ ಪ್ರವಾಹದಿಂದ 1,354ಕ್ಕೂ ಹೆಚ್ಚು ಮನೆಗಳಿಗೆ ಹಾಗೂ 822 ಹೆಕ್ಟೇರ್ ಕೃಷಿ ಭೂಮಿ, 71ಕ್ಕೂ ಹೆಚ್ಚು ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಸುವರ್ಣಾವತಿ, ಚಿಕ್ಕಹೊಳೆ ಅವಳಿ ಜಲಾಶಯಗಳಿಂದ ಪ್ರವಾಹದಿಂದ ಪಟ್ಟಣ ಸೇರಿದಂತೆ 10 ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡು ಸಾವಿರಾರು ಕುಟುಂಬಗಳನ್ನು ಅತಂತ್ರ ಪರಿಸ್ಥಿತಿಗೆ ದೂಡಿದೆ. ತಾಲೂಕಿನಲ್ಲಿ 16 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜತೆಗೆ 356 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ.
ತಾಲೂಕಿನಲ್ಲಿ ಆ.25 ರಿಂದ ಸೆ. 1ರ ರವರೆಗೆ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಯಳಂದೂರಿನಲ್ಲಿ 203, ಕಂದಹಳ್ಳಿ 112, ಕೃಷ್ಣಪುರ 73, ಉಪ್ಪಿನಮೋಳೆ 18, ಗುಂಬಳ್ಳಿ 01, ಹೊನ್ನೂರು 5, ಯರಿಯೂರು 37, ಗಣಿಗನೂರು 80, ಚಾಮಲಾಪುರ 14, ಅಗರ 278, ಮಾಂಬಳ್ಳಿ 164, ಮದ್ದೂರು 179, ಬೂದಿತಿಟ್ಟು 20, ಬನ್ನಿಸಾರಿಗೆ 26, ಕೆಸ್ತೂರು 39, ಬಸವಾಪುರ 26, ಕೆ.ಹೊಸೂರು 1, ಬಿಳಿಗಿರಿರಂಗನಬೆಟ್ಟ 3, ಅಂಬಳೆ 35, ಚಂಗಚಹಳ್ಳಿ 12, ವೈ.ಕೆ.ಮೋಳೆ 22, ದುಗ್ಗಹಟ್ಟಿ 4, ಮೆಲ್ಲಹಳ್ಳಿಯಲ್ಲಿ 2 ಮನೆಗಳಿಗೆ ಹಾನಿಯಾಗಿದೆ. 360ಕ್ಕೂ ಹೆಚ್ಚಿನ ಮನೆಗಳ ಗೋಡೆಗಳು ಕುಸಿದಿವೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಭತ್ತದ ಬಿತ್ತನೆ ಮಾಡಲಾಗಿತ್ತು. ಇದರೊಂದಿಗೆ ಕಬ್ಬು, ಮುಸುಕಿನ ಜೋಳ ಹಾಗೂ ತೋಟಗಾರಿಕೆ ಬೆಳೆಗಳಾದ ಬಾಳೆ, ತರಕಾರಿ, ಹೂ ನಾಶವಾಗಿದೆ. ಜಮೀನುಗಳಿಗೆ ನೀರು ನುಗ್ಗಿ ಕೆಲ ಬೆಳೆಗಳು ಕೊಚ್ಚಿ ಹೋಗಿದ್ದರೆ, ಕೆಲವು ಕೊಳೆಯುತ್ತಿವೆ. ತಾಲೂಕಿನ ಅಧಿಕಾರಿಗಳು ನಡೆಸಿರುವ ವರದಿಯ ಮಾಹಿತಿ ಜತೆಗೆ ಇನ್ನೂ ಹೆಚ್ಚು ಹಾನಿಯಾಗಿರುವ ಸಂಭವ ಇದೆ. ತುರ್ತು ಪರಿಹಾರ ನೀಡುಬೇಕು ಎಂದು ಜನರು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಶಾಸಕರು ಮನವಿ ಸಲ್ಲಿಸಿ ತಕ್ಷಣ ಪರಿಹಾರ ಘೋಷಣೆ ಮಾಡಬೇಕು ಎಂದು ತಾ.ಪಂ. ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು ಮತ್ತಿತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net