

ಚಿತ್ರದುರ್ಗ: ರಾಜ್ಯದ ಹಲವು ತರಕಾರಿ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಕಳೆದ ಎರಡ್ಮೂರು ದಿನಗಳಿಂದಲೂ 1 ಕೆ.ಜಿ.ಗೆ 80 ರೂ.ನಂತೆ ಮಾರಾಟವಾಗುತ್ತಿದ್ದು, ಮುಂದಿನ ಒಂದು ವಾರದೊಳಗೆ 100 ರೂ. ಗಡಿ ದಾಟಲಿದೆ.
ಕರ್ನಾಟಕದಲ್ಲಿ ಬರ ಎದುರಾದ ಕಾರಣ 82 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಈರುಳ್ಳಿ ಬರಕ್ಕೆ ನೈವೇದ್ಯವಾಗಿದೆ. ಅಲ್ಲದೆ, 5ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯುವ ಮಹಾರಾಷ್ಟ್ರದಲ್ಲೂ ಇಳುವರಿ ಕುಸಿತ ಕಂಡಿದ್ದು, ಆಮದು ಪ್ರಮಾಣ ಎಂದಿಗಿಂತಲೂ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ, ದೀಪಾವಳಿ ಹಬ್ಬದ ವೇಳೆಗೆ ಅಥವಾ ಆನಂತರ 150 ರೂ. ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಮೂರು ವರ್ಷ ವರುಣನ ಆರ್ಭಟ, ನೆರೆ ಹಾವಳಿಗೆ ಸಿಲುಕಿ ನಾಶವಾಗಿದ್ದ ಈರುಳ್ಳಿ ರೈತರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿತ್ತು. ಈ ಬಾರಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲು ಮುಂದಾಗಿದ್ದು ಕೂಡ ಬರಕ್ಕೆ ತುತ್ತಾದ ಪರಿಣಾಮ ಶೇ 75ರಷ್ಟು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ಟೋಬರ್ ಕೊನೆ ವಾರದಲ್ಲಿ ಬೆಲೆ ಹೆಚ್ಚಳವಾಗಿದ್ದು, ಫಸಲು ಕೈಸೇರಿದ ಶೇ 20ರಷ್ಟು ರೈತರಿಗೆ ಮಾತ್ರ ಅನುಕೂಲವಾಗುವ ಸಾಧ್ಯತೆ ಇದೆ.
ಎರಡು ತಿಂಗಳ ಹಿಂದೆಯಷ್ಟೇ ಟೊಮ್ಯಾಟೊ ಕೂಡ ವಿಪರೀತ ಬೆಲೆ ಏರಿಕೆ ಕಂಡು ಕೆಲ ರೈತರು ನಿರೀಕ್ಷೆಗೂ ಮೀರಿ ಲಾಭ ಗಳಿಸಿದ್ದರು. ಇದೇ ಲಾಭದ ನಿರೀಕ್ಷೆಯಲ್ಲಿದ್ದ ಅನೇಕರು ದಿಢೀರ್ ಬೆಲೆ ಕುಸಿತ ಕಂಡು ಪ್ರತಿ ಕೆ.ಜಿ.ಗೆ ಸಗಟು ಮಾರುಕಟ್ಟೆಯಲ್ಲಿ 2 ರೂ. ಆಗಿದ್ದರಿಂದ ರಸ್ತೆಯಲ್ಲಿ ಸುರಿದು ಕಣ್ಣೀರು ಸುರಿಸಿದ್ದರು. ಆ ಸ್ಥಿತಿ ಈರುಳ್ಳಿ ಬೆಳೆಗೆ ಬರಲು ಸಾಧ್ಯವಿಲ್ಲ ಎಂಬ ಮಾತು ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ.
ಸದ್ಯ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆದಿರುವ ಈರುಳ್ಳಿ ಬೆಂಗಳೂರು ಮಾರುಕಟ್ಟೆಗೆ ರಫ್ತಾಗುತ್ತಿದ್ದು, ಬಾಗಲಕೋಟೆ ಸೇರಿ ಉತ್ತರ ಕರ್ನಾಟಕ ಭಾಗದಿಂದ ನವೆಂಬರ್, ಡಿಸೆಂಬರ್‌ನಲ್ಲಿ ಇಳುವರಿ ಕೈ ಸೇರಲಿದ್ದು, ಆಮದು ಸಮರ್ಪಕ ಪ್ರಮಾಣದಲ್ಲಿ ಆದರೆ, ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಸ್ಥರು.
ಮುಂಗಾರು ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯ 4,779 ಹೆಕ್ಟೇರ್ ಪ್ರದೇಶದಲ್ಲಿ ಹಾಕಲಾಗಿದ್ದ ಈರುಳ್ಳಿ ಬೆಳೆ ಶೇ 100ರಷ್ಟು ಹಾನಿಯಾಗಿದೆ. ನೀರಾವರಿ ಆಶ್ರಿತ ಬೆಳೆ ಚೆನ್ನಾಗಿ ಬಂದಿದ್ದು, ಇಳುವರಿಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಗಡ್ಡೆಯ ಗಾತ್ರ ಅನುಸರಿಸಿ ರೈತರ ಬಳಿ ಕೆ.ಜಿ.ಗೆ 45ರಿಂದ 50ರವರೆಗೂ ವ್ಯಾಪಾರಸ್ಥರು ಖರೀದಿಸುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ಬೆಲೆ ನಿಯಂತ್ರಣಕ್ಕೆ ಬಾರದೆ, ಹೆಚ್ಚಳವಾದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಈ ಹಿಂದಿನಂತೆ ವಿದೇಶಗಳಿಂದ ಆಮದು ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.