ನೂತನ ಶಾಖೆ ಉದ್ಘಾಟನೆ 27ಕ್ಕೆ

Vittal Ladwa Legend
Published on

ಹುಬ್ಬಳ್ಳಿ: ಇಲ್ಲಿಯ ದಿ ಎಸ್.ಎಸ್.ಕೆ. ಕೋ-ಆಪ್ ಬ್ಯಾಂಕ್ ಬಾರದಾನ ಸಾಲಿನಲ್ಲಿ ನೂತನ ಶಾಖೆ ತೆರೆಯುತ್ತಿದ್ದು, ಉದ್ಘಾಟನಾ ಸಮಾರಂಭವನ್ನು ಡಿ. 27ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಚೇರ್ಮನ್ ವಿಠ್ಠಲ ಲದವಾ ತಿಳಿಸಿದರು.

ದಾಜಿಬಾನಪೇಟೆಯ ಬ್ಯಾಂಕ್​ನ ಮುಖ್ಯ ಶಾಖೆಯ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಿಂದ ಆರ್​ಬಿಐನ ಎಲ್ಲ ನಿರ್ದೇಶನಗಳನ್ನು ಪಾಲಿಸುವ ಮೂಲಕ ಶಾಖೆ ಪ್ರಾರಂಭಿಸಲು ಅನುಮತಿ ಪಡೆದ ರಾಜ್ಯದ ಏಕೈಕ ಸಹಕಾರಿ ಬ್ಯಾಂಕ್ ಇದಾಗಿದೆ. ಯುಪಿಐ ಮೂಲಕ ಫೋನ್ ಪೇ, ಗೂಗಲ್ ಪೇ ಮತ್ತಿತರ ಆಪ್​ಗಳ ಮುಖಾಂತರ ಸೇವೆ ನೀಡುತ್ತಿರುವ ಜಿಲ್ಲೆಯ ಪ್ರಥಮ ಬ್ಯಾಂಕ್ ಸಹ ಆಗಿದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೂತನ ಶಾಖೆ ಉದ್ಘಾಟಿಸಲಿದ್ದು, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಯುಪಿಐ ಸೇವೆ ಉದ್ಘಾಟಿಸಲಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಎ.ಟಿ.ಎಂ. ಉದ್ಘಾಟಿಸಲಿದ್ದು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಮೊಬೈಲ್ ಆಪ್ ಬಿಡುಗಡೆ ಮಾಡುವರು. ಅತಿಥಿಗಳಾಗಿ ಶಾಸಕ ಎಚ್.ಕೆ. ಪಾಟೀಲ, ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ.ಡಿ. ಮಲ್ಲೂರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಟಿ.ಎಂ. ಮೆಹರವಾಡೆ ಭಾಗವಹಿಸಲಿದ್ದಾರೆ ಎಂದರು. ಪುನಶ್ಚೇತನ ಮಂಡಳಿ ಬ್ಯಾಂಕ್​ನ ಜವಾಬ್ದಾರಿ ವಹಿಸಿಕೊಂಡ ನಂತರ 2010ರಲ್ಲಿ 18 ಕೋಟಿ ರೂ. ಇದ್ದ ದುಡಿಯುವ ಬಂಡವಾಳ 2020ರಲ್ಲಿ 44 ಕೋಟಿ ರೂ.ಗೆ ಏರಿಕೆಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್​ಗಳು ಒದಗಿಸಿರುವ ಎಲ್ಲ ಸೌಲಭ್ಯಗಳನ್ನು ನಮ್ಮ ಬ್ಯಾಂಕ್​ನ ಗ್ರಾಹಕರಿಗೆ ನೀಡುತ್ತಿರುವುದು ವಿಶೇಷ ಎಂದರು. ಬ್ಯಾಂಕ್ ವೈಸ್ ಚೇರ್ಮನ್ ನಾರಾಯಣ ಜರತಾರಘರ, ನಿರ್ದೇಶಕರಾದ ದೀಪಕ ಮಗಜಿಕೊಂಡಿ, ಕೃಷ್ಣ ಕಾಟಿಗರ, ಪ್ರಕಾಶ ಬುರಬುರೆ, ನಾರಾಯಣ ಖೋಡೆ, ವಸಂತಕುಮಾರ ಲದವಾ, ಸುರೇಶ ಭಾಂಡಗೆ, ರತ್ನಮಾಲಾ ಬದ್ದಿ, ಸರಳಾ ಭಾಂಡಗೆ, ಮ್ಯಾನೇಜರ್ ಸುನೀಲ ಹನುಮಸಾಗರ, ಇತರರು ಇದ್ದರು.

ಜೂನ್​ನಲ್ಲಿ ಶತಮಾನೋತ್ಸವ; ಎಸ್.ಎಸ್.ಕೆ. ಬ್ಯಾಂಕ್ ಆರಂಭವಾಗಿದ್ದು 1921ರಲ್ಲಿ. 2021ರ ಜೂನ್​ನಲ್ಲಿ ಶತಮಾನೋತ್ಸವ ಆಚರಿಸಲಾಗುವುದು. ಮುಂಬರುವ ದಿನಗಳಲ್ಲಿ ಕೇಶ್ವಾಪುರ, ಹಳೇಹುಬ್ಬಳ್ಳಿ, ಧಾರವಾಡ, ಗದಗ, ಗಜೇಂದ್ರಗಡ ಶಾಖೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ವಿಠ್ಠಲ ಲದವಾ ತಿಳಿಸಿದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net