ನೂತನ ವಾರ್ಡ್‌ಗಳ ಅಭಿವೃದ್ಧಿಗೆ ಗ್ರಹಣ

20 NMG 01 (2)
ನಾಗಮಂಗಲ ಪುರಸಭೆಗೆ ನೂತನವಾಗಿ ಸೇರ್ಪಡೆಯಾದ ಗ್ರಾಮ ಮುದ್ದೇಗೌಡನಕೊಪ್ಪಲಿನಲ್ಲಿನ ಚರಂಡಿಯ ಅವ್ಯವಸ್ಥೆ.
Published on

ನಾಗಮಂಗಲ: ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸೇರ್ಪಡೆ ಮಾಡಿಕೊಂಡ ಕೆಲ ಗ್ರಾಮಗಳು ಇಂದಿಗೂ ಮೂಲ ಸೌಕರ್ಯದಿಂದ ವಂಚಿತವಾಗಿವೆ.

ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಹಲವು ವರ್ಷಗಳಾದರೂ ಈ ಗ್ರಾಮಗಳಿಗೆ ಅಗತ್ಯ ಸೌಲಭ್ಯಗಳು ಸಿಕ್ಕಿಲ್ಲ. ಅತ್ತ ಗ್ರಾಮ ಪಂಚಾಯಿತಿಗೂ ಸೇರದೆ, ಇತ್ತ ಪುರಸಭೆಯಿಂದಲೂ ನಿರ್ಲಕ್ಷ್ಯಕ್ಕೊಳಗಾಗಿ ಅಭಿವೃದ್ಧಿ ಕಾಣದಾಗಿವೆ. ಹೊಸ ವಾರ್ಡ್‌ಗಳ ಅಭಿವೃದ್ಧಿಗೆ ಗ್ರಹಣ ಹಿಡಿದಿದ್ದು, ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಇದ್ದ ವಾರ್ಡ್‌ಗಳ ಜತೆಗೆ 7 ಹೊಸ ವಾರ್ಡ್‌ಗಳು ವಿಲೀನಗೊಂಡಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೇಭೂವನಹಳ್ಳಿ, ಬೀರೇಶ್ವರಪುರ, ಮಾಯಣ್ಣಗೌಡನಕೊಪ್ಪಲು, ಕಸುವಿನಹಳ್ಳಿ, ಮದಲಹಳ್ಳಿ, ಬಳಪದಮಂಟಿಕೊಪ್ಪಲು, ಉಪ್ಪಾರಹಳ್ಳಿ, ಬದ್ರಿಕೊಪ್ಪಲು, ಚೌಡೇನಹಳ್ಳಿ, ತೊಳಲಿ, ಬಸವೇಶ್ವರನಗರ ಹಾಗೂ ಕೆ.ಮಲ್ಲೇನಹಳ್ಳಿ ಗ್ರಾಮಗಳು ಸೇರ್ಪಡೆಯಾದವು. ಆದರೆ, ಪುರಸಭೆ ವ್ಯಾಪ್ತಿಗೆ ಒಳಪಟ್ಟು ಎರಡು ಮೂರು ವರ್ಷಗಳೇ ಕಳೆದರೂ ನೂತನ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿ ದೀಪ, ನೈರ್ಮಲ್ಯ ವ್ಯವಸ್ಥೆ ಸಂಪೂರ್ಣ ಮರೀಚಿಕೆಯಾಗಿವೆ. ಪುರಸಭೆ ಚುನಾವಣೆ ನಡೆದು ಎರಡು ವರ್ಷ ಕಳೆದಿದ್ದರೂ ಆಡಳಿತ ಮಂಡಳಿ ರಚನೆಯಾಗದಿರುವುದು ಅಭಿವೃದ್ಧಿಗೆ ತೊಡಕಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಖಲೆಗಳನ್ನು ಪುರಸಭೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಜನರು ಪರದಾಡುವಂತಾಗಿದೆ.

ಸಾಂಕ್ರಾಮಿಕ ರೋಗಗಳು: ರಸ್ತೆ, ಚರಂಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಗ್ರಾಮಗಳ ರಸ್ತೆಗಳಲ್ಲಿ ತ್ಯಾಜ್ಯಯುಕ್ತ ನೀರು ಹರಿಯುತ್ತಿದೆ. ಮನೆಗಳ ಪಕ್ಕದಲ್ಲಿರುವ ಗುಂಡಿಗಳಲ್ಲಿ ನೀರು ಸಂಗ್ರಹವಾಗುತ್ತಿದ್ದು, ಸೊಳ್ಳೆಗಳ ಹಾವಳಿ ವಿಪರೀತವಾಗಿದೆ. ಆಗಾಗ್ಗೆ ಡೆಂೆ, ಚಿಕೂನ್ ಗುನ್ಯಾ, ಮಲೇರಿಯಾ ಪ್ರಕರಣಗಳು ಕಂಡುಬರುತ್ತಿವೆ. ಕುಡಿಯುವ ನೀರನ್ನು ಎರಡು ಮೂರು ದಿನಗಳಿಗೊಮ್ಮೆ ಅರ್ಧ ಗಂಟೆ ಮಾತ್ರ ಬಿಡುತ್ತಾರೆ. ಎಲ್ಲ ಗ್ರಾಮಗಳಲ್ಲೂ ರಸ್ತೆಗಳು ಕಿತ್ತು ನಿಂತಿದ್ದು, ಗುಂಡಿ ಬಿದ್ದಿವೆ. ಮಳೆಗಾಲದಲ್ಲಿ ನೀರು ನಿಂತು ಹೊಂಡಗಳಂತಾಗುತ್ತವೆ. ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಅವೈಜ್ಞಾನಿಕ ಚರಂಡಿಗಳು: ಈ ಹಿಂದೆ ಗ್ರಾಮ ಪಂಚಾಯಿತಿಯಿಂದಲೂ ಸಂಪೂರ್ಣ ಚರಂಡಿ ವ್ಯವಸ್ಥೆ ಮಾಡಿಲ್ಲ. ಗ್ರಾಮಗಳ ತ್ಯಾಜ್ಯಯುಕ್ತ ನೀರು ಸರಾಗವಾಗಿ ಹರಿಯದಂತೆ ಅಸಮರ್ಪಕ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಗ್ರಾಮಗಳಲ್ಲಿ ದುರ್ನಾತ ಮೂಗಿಗೆ ಬಡಿಯುತ್ತಿದೆ.

6 ವರ್ಷ ಸಮಯ ವ್ಯರ್ಥ: ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ 2 ವರ್ಷಗಳ ಕಾಲ ಚುನಾವಣೆ ನಡೆಯಲಿಲ್ಲ. ನಂತರ ಚುನಾವಣೆ ನಡೆದರೂ 2 ವರ್ಷ ಆಡಳಿತ ಮಂಡಳಿ ರಚನೆಯಾಗದೆ ಉಳಿದಿತ್ತು. ಮತ್ತೆ 2 ವರ್ಷಗಳ ಕಾಲ ಕರೊನಾ ಎದುರಾದ ಕಾರಣ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡವು.

ಗ್ರಾಮೀಣರಂತೆ ಬದುಕು: ಪುರಸಭೆಯಾದರೂ ನೂತನ ವಾರ್ಡ್‌ಗಳ ಜನರು ಗ್ರಾಮೀಣರಂತೆ ಜೀವನ ನಡೆಸುತ್ತಿದ್ದಾರೆ. ಪಟ್ಟಣದಂತೆ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ಹೆಸರಿಗಷ್ಟೇ ಪುರಸಭೆ ಎನ್ನುವಂತಾಗಿದೆ.

ಒಳಚರಂಡಿ, ಕುಡಿಯುವ ನೀರು ಮತ್ತು ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವ ಮೂಲಕ ನೂತನ ವಾರ್ಡ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ಮೂಲಸೌಲಭ್ಯ ಕಲ್ಪಿಸಲಾಗಿದೆ. ಕೆಲವು ವಾರ್ಡ್‌ಗಳಿಗೆ ಅನುದಾನ ಹಾಕಲಾಗಿದ್ದು ಕಾಮಗಾರಿ ನಡೆಯುತ್ತಿವೆ. ನೂತನ ವಾರ್ಡ್‌ಗಳ ಕಡೆಗಣನೆ ಮಾಡದೆ ಪಟ್ಟಣದ ವಾರ್ಡ್‌ಗಳಂತೆ ಅಭಿವೃದ್ಧಿಪಡಿಸಲಾಗುವುದು.
> ಸುರೇಶ್‌ಗೌಡ, ಶಾಸಕ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದಾಗಲೇ ಹಲವು ಗ್ರಾಮಾಭಿವೃದ್ಧಿ ಕೆಲಸಗಳು ಜರುಗಿದ್ದವು. ಪುರಸಭೆಗೆ ಸೇರಿದ ನಂತರ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನ ವಾರ್ಡ್‌ಗಳಲ್ಲಿ ಚರಂಡಿಗಳು ಹಾಳಾಗಿದ್ದು, ತುಂಬಿ ನಿಂತಿವೆ. ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಿಲ್ಲ. ಪುರಸಭೆಯಿಂದ ಸ್ವಚ್ಛಗೊಳಿಸುವ ಕೆಲಸವೂ ಆಗುತ್ತಿಲ್ಲ. ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
> ಬಸವರಾಜು, ಗದ್ದೆಭೂವನಹಳ್ಳಿ

ನೂತನ ವಾರ್ಡ್‌ಗಳಾಗಿ ಸೇರ್ಪಡೆಯಾದ ಗ್ರಾಮಗಳಿಗೆ ವಿಶೇಷ ಅನುದಾನ ನೀಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪುರಸಭೆ ಅನುದಾನದಲ್ಲಿ ನೂತನ ವಾರ್ಡ್‌ಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ಕಾರ ನೂತನ ವಾರ್ಡ್‌ಗಳಿಗೆ ವಿಶೇಷ ಅನುದಾನ ನೀಡಬೇಕಿದೆ.
> ಚನ್ನಪ್ಪ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net