

ವಿರಾಜಪೇಟೆ: ವಿರಾಜಪೇಟೆ ನಗರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನೂತನ ನ್ಯಾಯಾಧೀಶರಾಗಿ ನಟರಾಜ್ ಸೋಮವಾರ ಅಧಿಕಾರ ಸ್ವೀಕರಿಸಿದರು.
ವಿರಾಜಪೇಟೆ ವಕೀಲರ ಸಂಘದಿಂದ ನ್ಯಾಯಾಲಯದ ಬಾರ್ ಅಸೋಸಿಯೇಷನ್ ಸಭಾಂಗಣದಲ್ಲಿ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು. ವಿರಾಜಪೇಟೆ ನಗರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನ್ಯಾಯಾಧೀಶೆ ಎಸ್. ಸುಜಾತಾ ಅವರು ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧಿಶರಾಗಿ ಕರ್ತವ್ಯ ನಿರ್ವಹಿಸುತಿದ್ದ ನಟರಾಜ್ ಅವರು 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ವಿರಾಜಪೇಟೆ ನ್ಯಾಯಾಧೀಶರಾಗಿ ಇಂದು ಅಧಿಕಾರ ಸ್ವೀಕರಿಸಿದರು.
ಬಳಿಕ ಮಾತನಾಡಿದ ನ್ಯಾಯಾಧೀಶರು ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳಲ್ಲಿ ಹೊಂದಾಣಿಕೆ ಇರಬೇಕು. ನ್ಯಾಯಾಪರವಾಗಿ ಕರ್ತವ್ಯ ನಿರ್ವಹಿಸಲು ಸರ್ವರ ಸಹಕಾರ ಅತ್ಯಗತ್ಯ. ರಾಜ್ಯದ ವಿವಿಧ ಸ್ಥಳಗಳಲ್ಲಿ ನ್ಯಾಯಾಲಯದ ಸಂಕೀರ್ಣ ಕಿರಿದಾಗಿದೆ. ಇಲ್ಲಿಯೂ ಅದೇ ಬವಣೆಯಿದೆ. ಆದ್ದರಿಂದ ಸುಮಾರು 5 ರಿಂದ 10 ಎಕರೆ ಸರ್ಕಾರಿ ಭೂಮಿ ಇದ್ದಲ್ಲಿ ತಿಳಿಸಿ, ಬಹು ಸಂಕೀರ್ಣ ಸುಸಜ್ಜಿತವಾದ ನ್ಯಾಯಾಲಯದ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ತರಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಸಿ.ಕೆ. ಪೂವಣ್ಣ ಮಾತನಾಡಿ, 1960ರಲ್ಲಿ ಪ್ರಾರಂಭವಾದ ವಕೀಲರ ಸಂಘವು ಇಂದು 126 ಮಂದಿ ಸದಸ್ಯ ಬಲವನ್ನು ಹೊಂದಿದೆ. ಕೊಡಗು ಜಿಲ್ಲೆ ಬೆಟ್ಟ ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿ ಕಾಡಾನೆ ಮತ್ತು ವನ್ಯಮೃಗಗಳ ಹಾವಳಿ ಹೆಚ್ಚಾಗಿದೆ. ಆದ್ದರಿಂದ ಕಲಾಪಗಳ ಅವಧಿಯಲ್ಲಿ ಸಮಯಾವಕಾಶ ನೀಡಿ ನ್ಯಾಯವಾದಿಗಳು ಬೇಗನೆ ಮನೆಗೆ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದರು. ನೂತನವಾಗಿ ಅಧಿಕಾರ ಸ್ವೀಕರಿಸಿದ ನ್ಯಾಯಾಧೀಶರಿಗೆ ವಿರಾಜಪೇಟೆ ವಕೀಲರ ಸಂಘ ಸರ್ವ ರೀತಿಯಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂತನ ನ್ಯಾಯಾಧೀಶರಿಗೆ ವಕೀಲರ ಸಂಘದ ವತಿಯಿಂದ ಕಿರು ಹೊತ್ತಿಗೆಯನ್ನು ನೀಡಿ ಗೌರವಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧಿಶ ಮಂಜುನಾಥ್, ಸರ್ಕಾರಿ ಅಭಿಯೋಜಕ ಯಾಸಿನ್ ಅಹಮ್ಮದ್, ಬಾರ್ ಅಸೋಸಿಯೇಷನ್ ವಿರಾಜಪೇಟೆ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು.