

ಚಿತ್ರದುರ್ಗ: ಮುಂಬರುವ ಜನವರಿಯೊಳಗೆ ನೂತನ ಜಿಲ್ಲಾಧಿಕಾರಿ ಕಚೇರಿ ಲೋಕಾರ್ಪಣೆಗೊಂಡು ದೈನಂದಿನ ಕಾರ್ಯ ಚಟುವಟಿಕೆಗಳು ಆರಂಭವಾಗಲಿವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ನಗರದ ಕುಂಚಿಗನಾಳ್ ಕಣಿವೆ ಬಳಿ ನಿರ್ಮಿಸುತ್ತಿರುವ ನೂತನ ಡಿಸಿ ಕಚೇರಿ ಭವನದ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿದ ನಂತರ ಮಾತನಾಡಿದರು.
ಈ ಹಿಂದೆಯೇ ಡಿಸಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡಿ ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ ಅಂದಾಜು 50 ಕೋಟಿ ರೂ. ಖರ್ಚಾಗಿರಬಹುದು. ಈಗ ಅವೈಜ್ಞಾನಿಕ ಎನ್ನುವುದರಿಂದ ಪ್ರಯೋಜನವಿಲ್ಲ. ಸರಿ ಪಡಿಸುವುದೊಂದೆ ಇರುವ ಮಾರ್ಗ ಎಂದರು.
ನಮ್ಮ ಇಲಾಖೆ ಈ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಿದೆ. ಕಟ್ಟಡ ನಿರ್ಮಾಣದ ಕಾರ್ಯ ಅಂತಿಮ ಹಂತದಲ್ಲಿದ್ದು, ಚಿತ್ರದುರ್ಗ ಜನತೆಗೆ ನೂತನ ಕಚೇರಿ ದೊರಕಲಿದೆ ಎಂದು ಹೇಳಿದರು.
ನಗರಸಾರಿಗೆ ಸೌಲಭ್ಯಕ್ಕೂ ಕ್ರಮ: ಚಿತ್ರದುರ್ಗ ನಗರವೂ ಬೆಳೆಯುತ್ತಿದ್ದು, ಹಿರಿಯೂರಿನತ್ತ ಸಾಗುತ್ತಿದೆ. ಜನಸಂಖ್ಯೆಯೂ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ನೂತನ ಭವನ ನಿರ್ಮಾಣವಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು. ನಗರದಿಂದ ದೂರವಾದರೆ, ನಗರ ಸಾರಿಗೆ ಸೌಲಭ್ಯ ಕಲ್ಪಿಸಲು ಮುಂಬರುವ ದಿನಗಳಲ್ಲಿ ಕ್ರಮವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಚಿವರು, ಶಾಸಕರ ಅಸಮಾಧಾನ: ಇದೇ ವೇಳೆ ಭವನದ ನೀಲ ನಕ್ಷೆಯೊಂದಿಗೆ ಸಚಿವರು ಕೆಲಕಾಲ ಡಿ. ಸುಧಾಕರ್, ಟಿ. ರಘುಮೂರ್ತಿ, ಡಿಸಿ ಸೇರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ನಂತರ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸ್ಥಳದಲ್ಲಿ ಜಿಲ್ಲಾಡಳಿತ ಭವನದ ಸಂಕೀರ್ಣ ನಿರ್ಮಾಣ ಆಗಬಾರದಿತ್ತು. ಈಗ ಏನು ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಆರಂಭದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಗುಡ್ಡವನ್ನು ಕಡಿದು ಕಾಮಗಾರಿ ಆರಂಭಿಸಲು ಹಣ ಸಾಲುವುದಿಲ್ಲವೆಂದು ಯೋಜನೆಯನ್ನು 47 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಅಗತ್ಯ ಕೆಲಸಗಳು, ಅಗ್ನಿ ನಿಯಂತ್ರಕ ವ್ಯವಸ್ಥೆ, ಕಟ್ಟಡದ ಸುತ್ತಲೂ ರಕ್ಷಣಾಗೋಡೆ ಸೇರಿ ಪೀಠೋಪಕರಣಕ್ಕಾಗಿ ಹೆಚ್ಚುವರಿಯಾಗಿ 15 ಕೋಟಿ ರೂ. ಅನುದಾನಕ್ಕೆ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಶೇ. 4ರಷ್ಟು ಜಿಎಸ್‌ಟಿ ಹಾಗೂ ಕಾಮಗಾರಿ ವೆಚ್ಚದಲ್ಲಿ ಉಂಟಾಗುವ ಹೆಚ್ಚಳಕ್ಕೂ ಅನುದಾನದ ಅಗತ್ಯವಿದೆ. ಹಳೆ ರಾಷ್ಟ್ರೀಯ ಹೆದ್ದಾರಿಯಿಂದ ನೂತನ ಡಿಸಿ ಕಚೇರಿ ಸಂಪರ್ಕಿಸಲು 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲು ಡಿಎಂಎಫ್ ಅನುದಾನ ನೀಡಲು ಚರ್ಚಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನೂತನ ಕಚೇರಿ ನಗರದ ಹೊರವಲಯದಲ್ಲಿ ಕಾರ್ಯಾರಂಭವಾದ ನಂತರ ಜನರಿಗೆ ತೊಂದರೆಯಾಗದಂತೆ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗಳು ನಗರದಲ್ಲಿಯೇ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕರಾದ ಟಿ. ರಘುಮೂರ್ತಿ, ಕೆ.ಸಿ. ವೀರೇಂದ್ರಪಪ್ಪಿ, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ರಾಜ್ಯ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ. ಯೋಗೀಶ್ ಬಾಬು, ಎಸಿ ಮಹೆಬೂಬ್ ಜಿಲಾನಿ ಖುರೇಷಿ, ತಹಸೀಲ್ದಾರ್ ಗೋವಿಂದರಾಜು, ಕಾಂಗ್ರೆಸ್ ಮುಖಂಡರಾದ ಸುರೇಶ್‌ಬಾಬು, ಶಶಿಕಲಾ ಸುರೇಶ್‌ಬಾಬು, ಜೆ.ಜೆ.ಹಟ್ಟಿ ಡಾ.ಬಿ. ತಿಪ್ಪೇಸ್ವಾಮಿ, ಸಂಪತ್‌ಕುಮಾರ್, ಎನ್.ಡಿ. ಕುಮಾರ್, ಕುಮಾರ್‌ಗೌಡ ಇತರರಿದ್ದರು.