ನೂತನ ಕಟ್ಟಡಗಳನ್ನು ಉದ್ಘಾಟಿಸಿದ ಸಚಿವ

07Rajesh10
Published on

ಚಾಮರಾಜನಗರ: ನಗರದಲ್ಲಿ ಮೂರು ಸರ್ಕಾರಿ ಕಟ್ಟಡಗಳನ್ನು ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಂಗಳವಾರ ಉದ್ಘಾಟಿಸಿದರು.

ನಗರದ ಪ್ರಗತಿ ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ, ಗಾಳೀಪುರದ ಬಳಿ ಇರುವ ಜಿಲ್ಲಾ ಪಶು ಆಸ್ಪತ್ರೆ, ಕೃಷಿ ಕಾಲೇಜಿನ ಬಾಲಕರು ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಗ್ರಂಥಾಲಯ ನೂತನ ಕಟ್ಟಡ ಉದ್ಘಾಟನೆ ಮಾಡಿದರು. ಈ ವೇಳೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಮಂಡ್ಯ ಕೃಷಿ ವಿವಿಯ ವ್ಯಾಪ್ತಿಗೆ ಹಾಸನ, ಚಾಮರಾಜನಗರ, ಪೊನ್ನಂಪೇಟೆೆ ಕೃಷಿ ಕಾಲೇಜುಗಳು ಬರುತ್ತದೆ. ಚಾಮರಾಜನಗರ ಕೃಷಿ ಪ್ರಧಾನ ಜಿಲ್ಲೆ. ನಮ್ಮಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿದ್ದು, ವಿದ್ಯಾರ್ಥಿಗಳು ಚೆನ್ನಾಗಿ ಓದಲೆಂದು ಕೃಷಿ ಕಾಲೇಜು ಸ್ಥಾಪನೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಗ್ರಂಥಾಲಯ ಉದ್ಘಾಟನೆ ಮಾಡಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಪರ್ಧೆಯೊಡ್ಡುತ್ತಿದ್ದಾರೆ ಎಂದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net