

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ಟ್ರಸ್ಟ್ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವಿರೋಧ ಆಯ್ಕೆಯಾಗಿದ್ದಾರೆ.
ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಟ್ರಸ್ಟ್‌ನ ವಿಶೇಷ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ್, ಇತರ ಪದಾಧಿಕಾರಿಗಳು, ಸೇವಾಶ್ರಮದ ವಿಶ್ವಸ್ಥ ಮಂಡಳಿ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಶ್ರೀಗಳ ಹೆಸರನ್ನು ಸೂಚಿಸಿದರು. ಬಳಿಕ ಶ್ರೀಗಳು ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಲಾಯಿತು.
ಜವಾಬ್ದಾರಿ ವಹಿಸಿಕೊಂಡ ಶ್ರೀಗಳು, ಸೇವಾಶ್ರಮದ ಆವರಣದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರ್‌ದಾಸ್ ಸ್ವಾಮೀಜಿ ಅವರ ಗದ್ದುಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಶಾಲಾ, ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ರಾಘವೇಂದ್ರ ಸ್ವಾಮೀಜಿ ಅವರ ಅವಿರತ ಸೇವೆ, ಶಿಕ್ಷಣ, ಸಂಸ್ಕಾರದ ಕ್ರಾಂತಿಯಿಂದಾಗಿ ಕುಗ್ರಾಮವಾಗಿದ್ದ ಮಲ್ಲಾಡಿಹಳ್ಳಿ ದೇಶದ ಗಮನ ಸೆಳೆಯುವಂತಾಯಿತು. ಅವರ ಶ್ರಮ ವ್ಯರ್ಥವಾಗದಂತೆ ನಡೆದುಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಟ್ರಸ್ಟ್‌ನ ವಿಶೇಷ ಸಾಮಾನ್ಯ ಸಭೆಯಲ್ಲಿ ಕಾರ್ಯದರ್ಶಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಖಜಾಂಚಿ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಸದಸ್ಯರಾದ ಪ್ರಕಾಶ್, ಕೆಂಗುಂಟೆ ಜಯಪ್ಪ, ಸೊಂಡೆಕೊಳ ಶ್ರೀನಿವಾಸ್, ರಾಮದಾಸ್, ರವಿಕುಮಾರ್, ರಾಜಪ್ಪ, ಎಲ್.ಎಸ್. ಶ್ರೀಕಂಠ ಮೂರ್ತಿ, ಎಸ್. ಶಿವರಾಮಯ್ಯ, ದ್ಯಾಮಣ್ಣ ಇತರರು ಇದ್ದರು.