

ಚಿತ್ರದುರ್ಗ: ಶಿವಶರಣ ನುಲಿಯ ಚಂದಯ್ಯ ಶ್ರೇಷ್ಠ ವಚನಕಾರರು. ಅವುಗಳ ಮೂಲಕವೇ ಕಾಯಕದ ಮಹತ್ವ ಸಾರಿದ ಮಹನೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ ಬಣ್ಣಿಸಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ದಾಸೋಹ ಸಂಸ್ಕೃತಿ ಮೂಲಕವೂ ಬೆಳಕು ಚೆಲ್ಲಿದರು. ಅವರು ಸುಮಾರು 48 ವಚನಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆಯಾಗಿ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲೂ ಸಂಚರಿಸಿದ ಕುರುಹು, ಪುರಾವೆ ಲಭ್ಯವಿವೆ. ಸಮಾಜದ ಅಂಕುಡೊಂಕು ತಿದ್ದಿ ಸುಧಾರಣೆ ತರುವಲ್ಲಿ ಅವರ ವಚನಗಳು ದಾರಿದೀಪವಾಗಿವೆ ಎಂದು ತಿಳಿಸಿದರು.
ಆಕಾಶವಾಣಿಯ ಕಾರ್ಯಕ್ರಮ ನಿರೂಪಕ ಡಾ. ನವೀನ್ ಮಸ್ಕಲ್ ಮಾತನಾಡಿ, ಕಾಯಕನಿಷ್ಠೆ, ಪ್ರಾಮಾಣಿಕತೆಗೆ ದೊಡ್ಡ ಹೆಸರು ನುಲಿಯ ಚಂದಯ್ಯ. ಕೊರಮ ಸಮಾಜದ ಸಾಂಸ್ಕೃತಿಕ ಅಸ್ಮಿತೆಯ ಸಂಕೇತವಾಗಿ, ಆರಾಧಕರಾಗಿ ಜನಮನ್ನಣೆ ಪಡೆದಿದ್ದಾರೆ ಎಂದು ಹೇಳಿದರು.
ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ವಚನಕಾರ ನುಲಿಯ ಚಂದಯ್ಯ ಬಸವಣ್ಣನ ಆಶಯವನ್ನು ತಮ್ಮ ಬದುಕಿನಲ್ಲೂ ಅನುಸರಿಸಿ ಸಮಾಜ, ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.
ಕೊರಮ ಸಮಾಜದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ನುಲಿಯ ಚಂದಯ್ಯ ಕಾಯಕದಲ್ಲೇ ದೇವರನ್ನು ಕಂಡ ಮಹಾಶರಣ. ಸಮಾಜದಿಂದ ಆ. 22ರಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ನುಲಿಯ ಚಂದಯ್ಯ ಜಯಂತಿಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕೊರಮ ಸಮುದಾಯದ ಮುಖಂಡರಾದ ಮಹಾದೇವಪ್ಪ, ಅಂಜಿನಮೂರ್ತಿ, ಮಂಜುನಾಥ್, ಮಂಜಣ್ಣ, ಮೂರ್ತಪ್ಪ, ಜಯಶೀಲಾ, ಬಸಣ್ಣ ಇತರರಿದ್ದರು.