ನುಡಿನಮನ ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅನಿಸಿಕೆ : ಜನಮನದಲ್ಲಿ ಡಾ.ವಜ್ರಕುಮಾರ ಅಜರಾಮರ

7 Dwd 1
Published on

ಧಾರವಾಡ : ಜನತಾ ಶಿಕ್ಷಣ ಸಂಸ್ಥೆಯನ್ನು ಕಟ್ಟುವಲ್ಲಿ ಡಾ. ನ.ವಜ್ರಕುಮಾರ ಅವರ ಕಾರ್ಯ ಅನನ್ಯ ಮತ್ತು ಅದ್ಭುತವಾದುದು. ಅವರು ಇಂದು ಭೌತಿಕವಾಗಿ ಇಲ್ಲದಿದ್ದರೂ ಅಸ್ತಿತ್ವ, ವ್ಯಕ್ತಿತ್ವವನ್ನು ಸಂಸ್ಥೆಯ ಮೂಲಕ ಉಳಿಸಿ ಹೋಗಿದ್ದಾರೆ. ಅವರು ತಮ್ಮ ಕಾರ್ಯದಿಂದ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ ಎಂದು ನಗರದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ವಿದ್ಯಾಗಿರಿ ಜೆಎಸ್‌ಎಸ್ ಸಂಸ್ಥೆಯ ಸನ್ನಿಧಿ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಅವರ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಜ್ರಕುಮಾರ ಅವರು ಮುರುಘಾಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಶ್ರೀಗಳು ಸ್ಮರಿಸಿದರು.
ಜೆಎಸ್‌ಎಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ವಜ್ರಕುಮಾರ ಅವರೊಬ್ಬ ಕರ್ಮಯೋಗಿಯಾಗಿ, ತ್ಯಾಗ ಜೀವಿಯಾಗಿ, ಭಗವಂತನ ಸಾಕ್ಷಾತ್ಕಾರ ಪಡೆದ ಪುಣ್ಯ ಜೀವಿಯಾಗಿದ್ದರು. ಅವರ ಕಾರ್ಯವೈಖರಿ ಮೆಚ್ಚುವಂಥದ್ದು. ಜೆಎಸ್‌ಎಸ್ ಸಂಸ್ಥೆಗಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟವರು. ಅವರ ಋಣ ತೀರಿಸಲು ಅಸಾಧ್ಯ. ಅವರು ಹಾಕಿದ ಅಡಿಪಾಯದ ಮೇಲೆ ಸಂಸ್ಥೆ ಇನ್ನಷ್ಟು ಉತ್ತರೋತ್ತರವಾಗಿ ಬೆಳೆಯುವಂತೆ ಶ್ರಮಿಸಬೇಕಾದುದು ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ್, ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿದರು. ಎಸ್‌ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜೀವಂದರ ಕುಮಾರ, ಜೆಎಸ್‌ಎಸ್ ಆಡಳಿತ ಮಂಡಳಿಯ ಸದಸ್ಯರಾದ ಡಾ. ಎಂ.ಎನ್. ತಾವರಗೇರಿ, ಕಮಲ ಮೆಹತಾ, ಸುಧೀರ ಕುಸನಾಳೆ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net