ನುಡಿದಂತೆ ನಡೆದ ಸರ್ಕಾರ

Nuḍidante naḍeda sarkāra
ಆಲಮೇಲ ತಾಲೂಕಿನ ತಾವರಖೇಡ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮ, ಭೀಮಾ ಏತ ನೀರಾವರಿ ಇಲಾಖೆಯ ವತಿಯಿಂದ ಪುನರ್‌ವಸತಿ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹಕ್ಕುಪತ್ರ ವಿತರಿಸಿದರು. ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಪಂ ಸಿಇಒ ರಾಹುಲ್ ಶಿಂಧೆ ಇತರರಿದ್ದರು.
Published on

ಆಲಮೇಲ: ಪುನರ್‌ವಸತಿ ಕೇಂದ್ರಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿದಾಗ ಮಾತ್ರ ನಿರಾಶ್ರಿತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ. ಅದಕ್ಕಾಗಿ ತಾವರಖೇಡ ಪುನರ್‌ವಸತಿ ಕೇಂದ್ರದಲ್ಲಿ ಕರ್ನಾಟಕ ನೀರಾವರಿ ನಿಗಮ, ಭೀಮಾ ಏತ ನೀರಾವರಿ ಇಲಾಖೆಯ ವತಿಯಿಂದ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಹಕ್ಕುಪತ್ರ ನೀಡಲಾಗಿದೆ. ಫಲಾನುಭವಿಗಳು ತಮಗೆ ಗುರುತಿಸಿರುವ ನಿವೇಶನಗಳಲ್ಲಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.

ಆಲಮೇಲ ತಾಲೂಕಿನ ತಾವರಖೇಡ ಗ್ರಾಮದಲ್ಲಿ ಶುಕ್ರವಾರ ಕರ್ನಾಟಕ ನೀರಾವರಿ ನಿಗಮ, ಭೀಮಾ ಏತ ನೀರಾವರಿ ಇಲಾಖೆ ವತಿಯಿಂದ ಪುನರ್‌ವಸತಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 3 ತಿಂಗಳಲ್ಲಿ ರಾಜ್ಯದ ಬಡ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿಯವರು ಮೈಸೂರಿನಲ್ಲಿ ಚಾಲನೆ ನೀಡಲಿದ್ದಾರೆ. ಇನ್ನುಳಿದ ಒಂದು ಗ್ಯಾರಂಟಿಗೂ ಶೀಘ್ರದಲ್ಲಿ ಚಾಲನೆ ಪಕ್ಷವು ನುಡಿದಂತೆ ನಡೆಯಲಿದೆ ಎಂದರು.

ದಿ. ಎಂ.ಸಿ. ಮನಗೂಳಿಯವರ ಕನಸಿನ ಕೂಸಾದ ಕಡಣಿ ಬ್ರಿಜ್ ಹಾಗೂ ಆಲಮೇಲಕ್ಕೆ ತೋಟಗಾರಿಕೆ ಮಹಾವಿದ್ಯಾಲಯದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಮಂಜೂರಿ ಮಾಡಿಸಿ ಸರ್ಕಾರದಿಂದ ಹಳ್ಳಿ, ಗ್ರಾಮ ಹಾಗೂ ಪಟ್ಟಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನಿಡಲಾಗುವುದು ಎಂದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ಈ ಭಾಗದ ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿರುವ ತೋಟಗಾರಿಕೆ ವಿದ್ಯಾಲಯ ಹಾಗೂ ಕಡಣಿ ಬ್ರಿಜ್ ನಿರ್ಮಾಣದ ಕಾಮಗಾರಿಗೆ ಸಚಿವರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಒಟ್ಟು 429 ನಿವೇಶನಗಳಲ್ಲಿ 11 ಫಲಾನುಭವಿಗಳಿಗೆ ವೇದಿಕೆಯ ಮುಖಾಂತರ ಸಚಿವ ಎಂ.ಬಿ. ಪಾಟೀಲ, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಕಡಣಿ ಗ್ರಾಪಂ ಅಧ್ಯಕ್ಷ ಬಸಲಿಂಗಪ್ಪ ಕತ್ತಿ ಹಕ್ಕುಪತ್ರ ವಿತರಿಸಿದರು.

ತಾಪಂ ಇಒ ಬಾಬು ರಾಠೋಡ್, ಸಿಪಿಐ ಡಿ. ಹುಲಗಪ್ಪ, ತಹಸೀಲ್ದಾರ್ ಸುರೇಶ ಚಾವಲರ, ಭೀಮಾ ಏತ ನೀರಾವರಿ ಎಇಇ ಲಕ್ಷ್ಮೀಕಾಂತ, ಕಂದಾಯ ನಿರೀಕ್ಷಕ ಎಂ.ಎ. ಅತ್ತಾರ, ಪಿಡಿಒ ಶರಣಗೌಡ ಕಡ್ಲೇವಾಡ, ಎಇಇ ಸಂತೋಷಕುಮಾರ ಪಾಟೀಲ, ಎಇ ಅರುಣಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net