

ಔರಾದ್: ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಫೆ. 13ಕ್ಕೆ ಜರುಗಲಿರುವ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಎಬಿವಿಪಿ ಕಾರ್ಯಕರ್ತರು ಪಟ್ಟಣದ ವಿವಿಧೆಡೆ ಗೋಡೆ ಬರಹಗಳು ಬರೆಯುವ ಮೂಲಕ ನುಡಿ ಜಾತ್ರೆಗೆ ಆಹ್ವಾನಿಸುತ್ತಿದ್ದಾರೆ. ಪಟ್ಟಣದ ವಿವಿಧ ವೃತ್ತ, ಶಾಲೆ, ಸಾರ್ವಜನಿಕ ಕಟ್ಟಡಗಳ ಮೇಲೆ ಕನ್ನಡದ ಗೋಡೆ ಬರಹಗಳನ್ನು ಬರೆದು ಗಮನ ಸೆಳೆಯುತ್ತಿದ್ದಾರೆ.
ಪಟ್ಟಣದ ಬಿಎಸ್ಎನ್ಎಲ್ ಟವರ್ ದಿಂದ ಕನ್ನಡಾಂಬೆ ವೃತ್ತ, ಆದರ್ಶ ವಿದ್ಯಾಲಯ, ಸರ್ಕಾರಿ ಪ್ರೌಢ ಶಾಲೆ, ಅಮರೇಶ್ವರ ಕಾಲೇಜು ಸೇರಿದಂತೆ 150ಕ್ಕೂ ಹೆಚ್ಚು ಕಡೆ ವಿವಿಧ ರೀತಿಯ ಕನ್ನಡದ ಸೊಬಗನ್ನು ಹೆಚ್ಚಿಸುವ ಗೋಡೆ ಬರಹಗಳನ್ನು ಎಬಿವಿಪಿ ಕಾರ್ಯಕರ್ತರು ಬರೆಯುವಲ್ಲಿ ನಿರತರಾಗಿದ್ದಾರೆ. ಕನ್ನಡ ಕಂಪು ಪಟ್ಟಣದಲ್ಲಿ ವಿವಿಧ ವರ್ಣರಂಜಿತ ಬಣ್ಣಗಳಲ್ಲಿ ಫಳಫಳ ಹೊಳೆಯವಂತೆ ಎಬಿವಿಪಿ ತಂಡ ಮಾಡುತ್ತಿರುವುದು ವಿಶೇಷ.
ಎಲ್ಲಾದರೂ ಇರು-ಎಂತಾದರು ಇರು ಎಂದೆಂದಿಗೂ ನೀ ಕನ್ನಡಿಗನಾಗಿರು, ಸಮ್ಮೇಳನಕ್ಕೆ ನೀವು ಬನ್ನಿ-ನಿಮ್ಮವರನ್ನೂ ಕರೆತನ್ನಿ, ಕನ್ನಡವೇ ಸತ್ಯ-ಕನ್ನಡವೇ ನಿತ್ಯ, ಕನ್ನಡ-ಕನ್ನಡ ಬನ್ನಿ ನಮ್ಮ ಸಂಗಡ, ಕನ್ನಡಕ್ಕೆ ಹೋರಾಡು ಕನ್ನಡದ ಕಂದಾ ಸೇರಿದಂತೆ ಹಲವಾರು ನೆಚ್ಚಿನ ನುಡಿ ಸಾಲುಗಳನ್ನು ಗೋಡೆಗಳಲ್ಲಿ ಬರೆಯಲಾಗುತ್ತಿದೆ.
ಗೋಡೆ ಬರಹದ ಎಬಿವಿಪಿ ತಂಡದಲ್ಲಿ ಹಾವಪ್ಪ ದ್ಯಾಡೆ, ಅಶೋಕ ಶೆಂಬೆಳ್ಳಿ, ಅಂಬಾದಾಸ ನಳಗೆ, ಯೂನುಸ್ ಮುಲ್ಲಾ, ರಮೇಶ ವಾಘಮಾರೆ, ಅನೀಲ ಮೇತ್ರೆ, ಮಲ್ಲಿಕಾರ್ಜುನ, ರಮೇಶ ಪಾಂಚಾಳ ಇತರರು ತೊಡಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಸಮ್ಮೇಳನಾಧ್ಯಕ್ಷರು…
1 ಶ್ರೀ ಸಿದ್ದರಾಮ ಶರಣರು ಬೆಲ್ದಾಳ್ (2004)
2 ಡಾ.ರಾಜೇಂದ್ರ ಯರನಾಳೆ (2011-12)
3 ಶಿವಕುಮಾರ ಕಟ್ಟೆ (2013-14)
4 ಬಾ.ನಾ. ಸೋಲಾಪೂರೆ (2017)
5 ಚನ್ನಬಸವ ಹೇಡೆ (2018-19)
6 ಸಂಜುಕುಮಾರ ಜುಮ್ಮಾ (2021)
ತಾಲೂಕು ಮಟ್ಟದ 6ನೇ ಸಮ್ಮೇಳನ ನಿಮಿತ್ತ ಪಟ್ಟಣದ ವಿವಿಧೆಡೆ ಗೋಡೆ ಬರಹ ಬರೆಯಲಾಗುತ್ತಿದೆ. ಪ್ರತಿ ಗೋಡೆಗಳಲ್ಲಿ ಕನ್ನಡದ ಕಂಪು ಸಾರುವ ಬರಹ, ಚಿತ್ರಗಳನ್ನು ಬರೆದು ಅವುಗಳಿಗೆ ವರ್ಣರಂಜಿತ ಬಣ್ಣಗಳನ್ನು ನೀಡಿ, ಎಲ್ಲರಿಗೂ ಸಮ್ಮೇಳನಕ್ಕೆ ಆಹ್ವಾನಿಸುವ ಜತೆಗೆ ಕನ್ನಡದ ಬಗ್ಗೆ ಹೆಮ್ಮೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ನುಡಿ ಜಾತ್ರೆ ಯಶಸ್ವಿಗೆ ಎಬಿವಿಪಿಯು ಕಸಾಪಕ್ಕೆ ಕೈಜೋಡಿಸಿದೆ.| ಅಂಬಾದಾಸ ನಳಗೆಎಬಿವಿಪಿ ಕಾರ್ಯಕರ್ತ ಔರಾದ್