

ಧಾರವಾಡ: ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ನಗರದ ದೇವಸ್ಥಾನಗಳು ಹಾಗೂ ಹೋಟೆಲ್ಗಳು ಸೋಮವಾರದಿಂದ ಪುನರಾರಂಭಗೊಂಡಿದ್ದು, ಎಲ್ಲ ಕಡೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಗರದ ಸೋಮೇಶ್ವರದ ಈಶ್ವರ ದೇವಸ್ಥಾನ, ನುಗ್ಗಿಕೇರಿ ಆಂಜನೇಯ ದೇವಸ್ಥಾನ, ಉಳವಿ ಚೆನ್ನಬಸವೇಶ್ವರ, ಗರಗ ಮಡಿವಾಳೇಶ್ವರ, ಮುರುಘಾಮಠ, ಆಲ್ಸೇಂಟ್ ಚರ್ಚ್, ಬಾಸೆಲ್ ಚರ್ಚ್ ಸೇರಿ ಪ್ರಮುಖ ದರ್ಗಾ, ಮಸೀದಿಗಳು ಅಧಿಕೃತವಾಗಿ ಬಾಗಿಲು ತೆರೆದವು.
ದೇವಸ್ಥಾನಗಳಿಗೆ ಆಗಮಿಸುವ ಭಕ್ತರಿಗೆ ಪೂಜೆ ನಂತರ ತೀರ್ಥ ಪ್ರಸಾದ ನೀಡುವುದು ಸಾಮಾನ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಭಕ್ತರು ದೇವಸ್ಥಾನ ಪ್ರವೇಶ ಮಾಡುವ ಪೂರ್ವದಲ್ಲೇ ಅವರ ಕೈಗೆ ಸ್ಯಾನಿಟೈಸರ್ ಹಾಕಿ ಪ್ರವೇಶ ನೀಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಕರೊನಾ ಹಾವಳಿ ಹಿನ್ನೆಲೆಯಲ್ಲಿ ಸರ್ಕಾರ ಹೋಟೆಲ್ ಹಾಗೂ ದೇವಸ್ಥಾನಗಳಲ್ಲಿ ಪಾಲಿಸಬೇಕಾದ ನಿಯಮಗಳ ಮಾರ್ಗಸೂಚಿ ಬಿಡುಗಡೆ ಸಹ ಮಾಡಿದೆ. ಅದೇ ರೀತಿಯಲ್ಲಿ ದೇವಸ್ಥಾನಗಳಲ್ಲಿ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪೂಜಾರಿಗಳು ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಿಲ್ಲ. ಇನ್ನು ಕೆಲ ದೇವಸ್ಥಾನಗಳಲ್ಲಿ ದೈಹಿಕ ಅಂತರ ಕಾಪಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಗುರುತುಗಳನ್ನು ಸಹ ಮಾಡಲಾಗಿದೆ.
ಇನ್ನು ಇಷ್ಟು ದಿನಗಳ ಕಾಲ ಕೇವಲ ಪಾರ್ಸಲ್ಗಳಿಗೆ ಸೀಮಿತವಾಗಿದ್ದ ಹೋಟೆಲ್ಗಳು ಸೇವೆ ಪ್ರಾರಂಭಿಸಿವೆ. ಆದರೆ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಕೆಲ ಹೋಟೆಲ್ಗಳಲ್ಲಿ ಇನ್ನೂ ಪಾರ್ಸಲ್ ಮಾತ್ರ ನೀಡಲಾಗುತ್ತಿದೆ. ಉಳಿದ ಕಡೆಗಳಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗ್ರಾಹಕರಿಗೆ ಸೇವೆ ನೀಡಲು ಮುಂದಾಗಿವೆ.
ಪ್ರವೇಶ ದ್ವಾರದಲ್ಲೇ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಸ್ಯಾನಿಟೈಸರ್ ನೀಡುವ ವ್ಯವಸ್ಥೆ ಮಾಡಲಾಗಿದೆ. ದೈಹಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದು ಟೇಬಲ್ನಲ್ಲಿ ಒಬ್ಬರು ಮಾತ್ರ ಕೂರಲು ಅವಕಾಶ ಕಲ್ಪಿಸಿದ್ದಾರೆ.