ನೀವು ಮಾಡಿದ ರಾಡಿ ತೊಳೆಯಲಾಗುತ್ತಿಲ್ಲ

Jagadish Shetter
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಕಾಂಗ್ರೆಸ್​ನವರು ಅರ್ಕಾವತಿ ಭೂ ಹಗರಣ ಮಾಡಿದ್ದಾರೆ. ಅದರಲ್ಲಿ ಏನು ರಾಡಿಯಾಗಿದೆ ಎಂಬುದನ್ನು ವಿಪಕ್ಷದ ನಾಯಕನಾಗಿದ್ದ ವೇಳೆ ನಾನೇ ಹೊರ ಹಾಕಿದ್ದೆ. ಇಷ್ಟೆಲ್ಲ ಆದ ಮೇಲೆ ಇವತ್ತು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅವರು ವಿಧಾನಸೌಧದಲ್ಲಿ ಬಿಜೆಪಿಯವರು ಮಾಡಿದ ರಾಡಿ ತೊಳೆಯುತ್ತೇವೆ ಎನ್ನುತ್ತಿದ್ದಾರೆ. ಈ ಮೊದಲು ರಾಡಿ ಮಾಡಿ ಹೋದವರು ನೀವೇ. ನೀವು ಮಾಡಿದ ರಾಡಿಯನ್ನು ತೊಳೆಯಲು ನಮ್ಮಿಂದಲೇ ಆಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಡಿಕೆಶಿ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ದಾಖಲಿಸುವ ಮೂಲಕ ಪ್ರಚಾರ ತೆಗೆದುಕೊಳ್ಳುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್​ನವರು ಹಲವು ಗಿಮಿಕ್​ಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ರಮೇಶ ಜಾರಕಿಹೊಳಿ ವಿರುದ್ಧ ಚುನಾವಣೆ ಅಕ್ರಮದ ಕುರಿತು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದೂ ಒಂದಾಗಿದೆ ಎಂದು ದೂರಿದರು.

ದೂರು ನೀಡುತ್ತಾರೆ ಎಂದರೆ, ಕಾಂಗ್ರೆಸ್​ನವರು ಯಾವ ರೀತಿಯ ಕೀಳು ಮಟ್ಟಕ್ಕೆ ಹೋಗಿದ್ದಾರೆ ಎನ್ನುವುದು ಸಾಬೀತಾಗಿದೆ. ಈ ಹಿಂದೆ ಯಾವ ರೀತಿ ಚುನಾವಣೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಹಿರಂಗವಾಗಿ ಕುಕ್ಕರ್ ಹಂಚುವ ಮೂಲಕ ಚುನಾವಣೆ ತಯಾರಿ ಮಾಡುತ್ತಿದ್ದಾರೆ. ಬೇರೆಯವರ ಬಗ್ಗೆ ಮಾತನಾಡಲು ಕಾಂಗ್ರೆಸ್​ನವರಿಗೆ ನೈತಿಕತೆ ಇಲ್ಲ ಎಂದು ಜರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net